ನವದೆಹಲಿ (ಕರಾವಳಿ ಟೈಮ್ಸ್) : ಏಪ್ರಿಲ್ 5 ಭಾನುವಾರ ರಾತ್ರಿ 9 ಗಂಟೆಗೆ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ, ಮನೆಗಳ ಮಹಡಿಗಳಲ್ಲಿ ನಿಂತು ಮೇಣದ ಬತ್ತಿ, ದೀಪ, ಮೊಬೈಲ್ ಲೈಟ್ ಹಾಗೂ ಟಾರ್ಟ್ ಹಿಡಿದು 9 ನಿಮಿಷಗಳ ಕಾಲ ಬೆಳಕು ಚೆಲ್ಲಿ ಕೊರೋನಾ ವಿರುದ್ಧದ ಹೋರಾಟಕ್ಕೆ ಒಗ್ಗಟ್ಟು ಪ್ರದರ್ಶಿಸಿ ಎಂದು ದೇಶದ ಜನತೆಗೆ ಪ್ರಧಾನಿ
ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ.
ದೇಶವಾಸಿಗಳೊಂದಿಗೆ ಇಂದು ಬೆಳಿಗ್ಗೆ ಪುಟ್ಟ ವಿಡಿಯೋ ಸಂದೇಶವನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿಯವರು ಮನೆಯಲ್ಲಿ ಒಬ್ಬರೇ ಏನು ಮಾಡಬೇಕು. ವೈರಸ್ ವಿರುದ್ಧದ ಯುದ್ಧವನ್ನು ಒಬ್ಬರೇ ಹೇಗೆ ಹೋರಾಡಲು ಸಾಧ್ಯವಾಗುತ್ತದೆ. ನಾವು ಮನೆಯೊಳಗೆ ಇದ್ದೇವೆ ಎಂದು ಕೊಳ್ಳದಿರಿ. ನಾವು ಯಾರೂ ಒಂಟಿಯಲ್ಲ. ದೇಶದ ಎಲ್ಲಾ ಜನರೂ ನಿಮ್ಮೊಂದಿಗಿದ್ದೇವೆ. ಜನರ ಒಗ್ಗಟ್ಟಿನ ಶಕ್ತಿ ಆಗಾಗ್ಗೆ ವ್ಯಕ್ತವಾಗುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಮನೆಯೊಳಗಿದ್ದೇ ಕೊರೋನಾ ವಿರುದ್ಧ ಹೋರಾಟ ಮಾಡುವ ಅನಿವಾರ್ಯತೆ ಇದೆ ಎಂದು ಸಾರಿ ಹೇಳಿದ್ದಾರೆ.
ದೀಪ ಬೆಳಗುವ ಮೂಲಕ ನಮ್ಮ ಮನದಲ್ಲಿ ನಾವು ಒಂಟಿಯಲ್ಲ ಎಂಬ ಸಂಕಲ್ಪ ಮಾಡಿ. ಯಾರೂ ಇಲ್ಲಿ ಒಂಟಿಯಲ್ಲ. 130 ಕೋಟಿ ಜನರು ಒಟ್ಟಿಗಿದ್ದೇವೆ. ಇದರಿಂದ ಯಾರಿಗೂ ಎಲ್ಲಿಯೂ ಯಾವುದೇ ಕಾರಣಕ್ಕೂ ತೊಂದರೆ ಉಂಟಾಗಬಾರದು. ಅದನ್ನು ನೀವೆಲ್ಲರೂ ಗಮನಿಸಬೇಕೆಂದಿದ್ದಾರೆ.
0 comments:
Post a Comment