ಮಂಗಳೂರು (ಕರಾವಳಿ ಟೈಮ್ಸ್) : ಸರಕಾರದ ಆರೋಗ್ಯ ಇಲಾಖೆಯ ವೈಫಲ್ಯತೆಯೇ ಮೈಸೂರು ತಾಲೂಕು ಆರೋಗ್ಯಾಧಿಕಾರಿಯನ್ನು ಬಲಿ ಪಡೆದಿದೆ ಎಂದು ಡಿವೈಎಎಫ್‍ಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿವೈಎಫ್‍ಐ ನೇತೃತ್ವದಲ್ಲಿ ಸರಕಾರಿ ಆಸ್ಪತ್ರೆ ಬಲಪಡಿಸಿರಿ, ಖಾಸಗೀ ಆಸ್ಪತ್ರೆಗಳನ್ನು ನಿಯಂತ್ರಿಸಿರಿ, ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಮತ್ತು ಎಲ್ಲ ಕೊರೊನಾ ಸೊಂಕಿತರಿಗೆ ಸಮಾನ ಗುಣಮಟ್ಟದ ಉಚಿತ ಚಿಕಿತ್ಸೆಗೆ ಒತ್ತಾಯಿಸಿ ಉರ್ವಸ್ಟೋರಿನಲ್ಲಿ ನಡೆದ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ರಾಜ್ಯ ಸರಕಾರ ಸಂಪೂರ್ಣ ಎಡವಿದೆ. ರಾಜ್ಯದಲ್ಲಿ ಸರಕಾರಿ ಆಸ್ಪತ್ರೆಗಳಿಗೆ ಕೊರೊನಾ ಪ್ರಕರಣ ನಿಭಾಯಿಸಲು ವೈದ್ಯರು ಸಹಿತ ನುರಿತ ಸಿಬ್ಬಂಧಿಗಳ ವ್ಯವಸ್ಥೆ ಮಾಡದೆ ಬರೇ ಇರುವ ವೈದ್ಯರುಗಳಿಂದಲೇ ವಿಪರೀತ ಕೆಲಸಗಳನ್ನು ನಿರ್ವಹಿಸಿದ ಕಾರಣ ಒತ್ತಡಕ್ಕೆ ಸಿಲುಕಿದ ವೈದ್ಯರು ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದು ಸರಕಾರದ ಆರೋಗ್ಯ ಇಲಾಖೆಯ ವೈಫಲ್ಯತೆಯಲ್ಲದೆ ಇನ್ನೇನೂ ಅಲ್ಲ. ಮೈಸೂರಿನ ತಾಲೂಕು ಆರೋಗ್ಯಾಧಿಕಾರಿ ಡಾ ನಾಗೇಂದ್ರ ಅವರನ್ನು ಇಲಾಖೆಯ ವೈಫಲ್ಯವೇ ಬಲಿ ಪಡೆದಿದೆ ಆರೋಪಿಸಿದರು.
ಸರಕಾರ ಕೊರೊನಾ ರೋಗ ಎದುರಿಸಲು ಬೇಕಾದ ಸಲಕರಣೆಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿದೆ. ಸರಕಾರದ ಆಸ್ಪತ್ರೆಗಳಿಗೆ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸುವ ಹಾಗೂ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸುವ ಯಾವುದೇ ಕೆಲಸಗಳು ಈವರೆಗೂ ನಡೆದಿಲ್ಲ. ಸರಕಾರಿ ಆಸ್ಪತ್ರೆಗಳ ವೈಫಲ್ಯತೆ ಖಾಸಗೀ ಆಸ್ಪತ್ರೆಗಳು ಕೊರೊನಾ ಹೆಸರಲ್ಲಿ ಲೂಟಿ ಮಾಡುವ ಸ್ಥಿತಿಗೆ ತಲುಪುವಂತೆ ಮಾಡಿದೆ. ಖಾಸಗೀ ಆಸ್ಪತ್ರೆಗಳು ಯಾವುದೇ ಮುಲಾಜಿಲ್ಲದೇ ಚಿಕಿತ್ಸೆ ಹೆಸರಲ್ಲಿ ರೋಗಿಗಳನ್ನು ವಂಚಿಸುವ ಪ್ರಕರಣ ದಿನನಿತ್ಯ ವರದಿಯಾದರೂ ಖಾಸಗೀ ಆಸ್ಪತ್ರೆಯ ವಿರುದ್ದ ಇದುವರೆಗೆ ಒಂದೇ ಒಂದು ಕ್ರಮಕೈಗೊಳ್ಳಲು ಸರಕಾರಕ್ಕೆ ಸಾದ್ಯವಾಗಿಲ್ಲ. ಈಗಾಗಲೇ ಜನ ಸಾಮಾನ್ಯರು ಉದ್ಯೋಗವಿಲ್ಲದೆ, ಬಿಡಿಗಾಸು ಇಲ್ಲದೇ ಕಂಗಾಲಾಗಿದ್ದು, ಒಂದೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಇನ್ನು ಆರೋಗ್ಯ ಕಾಳಜಿ ವಹಿಸುವುದು ಅವರಿಂದ ಸಾದ್ಯವಾಗದ ಮಾತು. ಆರೋಗ್ಯ ಕಾಳಜಿ ವಹಿಸುವುದು ಸರಕಾರದ ಕರ್ತವ್ಯ. ಸರಕಾರ ಎಲ್ಲ ಕೊರೊನಾ ಸೊಂಕಿತರಿಗೂ ಸಮಾನ ಗುಣಮಟ್ಟದ ಉಚಿತ ಚಿಕಿತ್ಸೆ ನೀಡಬೇಕೆಂದು ಒತ್ತಾಯಿಸಿ ಡಿವೈಎಫ್‍ಐ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ.
ಡಿವೈಎಫ್‍ಐ ಉರ್ವಸ್ಟೋರ್ ಘಟಕಾದ್ಯಕ್ಷ ಪ್ರಶಾಂತ್ ಎಂ ಬಿ, ಮನೋಜ್ ಉರ್ವಸ್ಟೋರ್, ಕಿಶೋರ್, ನಾಗೇಂದ್ರ, ರಘುವೀರ್, ಪ್ರದೀಪ್, ತಿಲಕ್, ತೇಜಸ್ವಿನಿ, ಹರಿಣಾಕ್ಷಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment