ಬೆಂಗಳೂರು, ಜುಲೈ 13, 2021 (ಕರಾವಳಿ ಟೈಮ್ಸ್) : ಈ ಬಾರಿಯ ಎಸ್ಸೆಸ್ಸೆಲ್ಸಿಗೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಎಸ್‍ಆರ್‍ಟಿಸಿ ಹಾಗೂ ಬಿಎಂಟಿಸಿ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟು ಆದೇಶಿಸಿದೆ.
ಜುಲೈ 19 ಹಾಗೂ 22 ರಂದು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಸಾರ್ಟಿಸಿ) ಹಾಗೂ ಬಿಎಂಟಿಸಿ ಅನುಮತಿ ನೀಡಿದ್ದು, ಈ ಬಗ್ಗೆ ಎರಡೂ ನಿಗಮಗಳು ಆದೇಶ ಹೊರಡಿಸಿವೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಕ್ಕಳು ತಮ್ಮ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಹೋಗಲು ಮತ್ತು ವಾಪಸ್ ಬರಲು ಅನುಮತಿ ನೀಡಲಾಗಿದೆ. ರಸ್ತೆ ಮಧ್ಯದಲ್ಲಿ ಪರೀಕ್ಷಾ ಕೇಂದ್ರಗಳು ಇದ್ದಲ್ಲಿ ಅಲ್ಲಿ ಕೋರಿಕೆ ನಿಲುಗಡೆಗೂ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಕಡ್ಡಾಯವಾಗಿ ಪರೀಕ್ಷೆ ಪ್ರವೇಶ ಪತ್ರ ಹೊಂದಿರಬೇಕು ಎಂದು ನಿರ್ದೇಶನ ನೀಡಲಾಗಿದೆ.
ಕೆಎಸ್‍ಆರ್ಟಿಸಿ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಬಿಎಂಟಿಸಿ ಬೆಂಗಳೂರು ನಗರದ ಒಳಗೆ ಉಚಿತವಾಗಿ ಸಂಚರಿಸಲು ಅವಕಾಶ ನೀಡಲಾಗಿದ್ದು, ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸುವುದು ಕಡ್ಡಾಯವಾಗಿದೆ. ಈ ಬಗ್ಗೆ ಈಗಾಗಲೇ ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಉಚಿತ ಪ್ರಯಾಣವನ್ನು ಅನುಮತಿಸಲು ನಿಗಮದ ಎಲ್ಲಾ ಚಾಲಕ-ನಿರ್ವಾಹಕರುಗಳಗೆ ಸೂಚಿಸಲಾಗಿದೆ ಎಂದು ನಿಗಮದ ಪ್ರಕಟಣೆಗಳು ತಿಳಿಸಿವೆ.
0 comments:
Post a Comment