ಇಲಾಖೆಯ ಕಣ್ಣು ತಪ್ಪಿಸಿ ರಾಜಾರೋಷವಾಗಿ ನಡೆಯುತ್ತಿದೆ ಬಡವರ ಜೀವ ಹಿಂಡುವ ಅಕ್ರಮ ಬಡ್ಡಿ ಮಾಫಿಯಾ? - Karavali Times ಇಲಾಖೆಯ ಕಣ್ಣು ತಪ್ಪಿಸಿ ರಾಜಾರೋಷವಾಗಿ ನಡೆಯುತ್ತಿದೆ ಬಡವರ ಜೀವ ಹಿಂಡುವ ಅಕ್ರಮ ಬಡ್ಡಿ ಮಾಫಿಯಾ? - Karavali Times

728x90

23 May 2022

ಇಲಾಖೆಯ ಕಣ್ಣು ತಪ್ಪಿಸಿ ರಾಜಾರೋಷವಾಗಿ ನಡೆಯುತ್ತಿದೆ ಬಡವರ ಜೀವ ಹಿಂಡುವ ಅಕ್ರಮ ಬಡ್ಡಿ ಮಾಫಿಯಾ?

ಬಂಟ್ವಾಳ, ಮೇ 24, 2022 (ಕರಾವಳಿ ಟೈಮ್ಸ್) : ಬಡ ಜನರ ಜೀವ ಹಿಂಡುವ, ಆತ್ಮಹತ್ಯೆಯಂತಹ ಗಂಭೀರ ಪ್ರಕರಣಗಳಿಗೆ ಕಾರಣವಾಗುವ ಅಕ್ರಮ ಬಡ್ಡಿ ವ್ಯವಹಾರಗಳನ್ನು ನಿಯಂತ್ರಿಸಲು ಸರಕಾರ ಸಾಕಷ್ಟು ಕ್ರಮ ಕೈಗೊಂಡಿದ್ದರೂ, ಲೇವಾದೇವಿ ವ್ಯವಹಾರಕ್ಕೆ ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ಕ್ರಮ ಜರುಗುತ್ತಿದ್ದರೂ ಇಲಾಖಾಧಿಕಾರಿಗಳ ಕಣ್ಣು ತಪ್ಪಿಸಿ ಈ ಬಡ್ಡಿ ಮಾಫಿಯಾಗಳು ಬಂಟ್ವಾಳದಲ್ಲಿ ಇನ್ನೂ ಜೀವಂತವಾಗಿದೆ ಎಂಬ ಮಾಹಿತಿಗಳು ದೊರೆಯುತ್ತಿವೆ.


ತಾಲೂಕಿನ ವಿವಿಧೆಡೆ ನಿರ್ದಿಷ್ಟ ವ್ಯಕ್ತಿಗಳು ಹೆಸರಿಗೆ ಹೆಸರಿಗೆ ಕೆಲವೊಂದು ವ್ಯಾಪಾರ ಮಳಿಗೆಗಳನ್ನು ಇಟ್ಟುಕೊಂಡು ಹಣಕಾಸು ಅಗತ್ಯ ಇರುವ ಬಡ ಹಾಗೂ ಗೌರವಸ್ಥ ಕುಟುಂಬಗಳನ್ನೇ ಗುರಿಯಾಗಿಸಿ ನಿರ್ದಿಷ್ಟ ಮೊತ್ತಕ್ಕೆ ನಿಗದಿತ ಬಡ್ಡಿ‌ ನಿಗದಿಪಡಿಸಿ ಹಣಕಾಸಿನ ಲೇವಾದೇವಿ ನಡೆಸುತ್ತಾರೆ. ಯಾವುದೇ ಹಣಕಾಸು ಸಂಸ್ಥೆಗಳು ವಿಧಿಸದ ರೀತಿಯ ದುಬಾರಿ ಮೊತ್ತದ ಬಡ್ಡಿ ಮೊತ್ತ ಗೊತ್ತುಪಡಿಸಿ ಈ ವ್ಯವಹಾರ ನಡೆಸಲಾಗುತ್ತಿದ್ದು, ಕೈ ಸಾಲ ಪಡೆದುಕೊಂಡವರು ಮಜ್ ಬೂರಿ ಆಗಿರುವಷ್ಟು ಸಮಯವೂ ಬಡ್ಡಿ ಕಂತುಗಳನ್ನು ಪಾವತಿಸುತ್ತಾ ಬರಬೇಕಲ್ಲದೆ ಸ್ಥಿತಿವಂತರಾದ ಬಳಿಕ ಸಾಲ ಪಡೆದ ಅಸಲು ಮೊತ್ತವನ್ನು ಯಥಾವತ್ ಪಾವತಿಸಬೇಕು ಎಂಬ ಅಲಿಖಿತ ನಿಯಮದಡಿ ಈ ದಂಧೆ ನಡೆಯುತ್ತಿದೆ. ಅದೂ ಕೂಡಾ ಯಾವುದೇ ದಾಖಲೆ ಪತ್ರಗಳಿಲ್ಲದೆ ಸಂಪೂರ್ಣ ಅಕ್ರಮವಾಗಿಯೇ ಈ ಬಡ್ಡಿ ದಂಧೆ ಯಾರ ಭಯವೂ ಇಲ್ಲದೆ ಮುಂದುವರಿಯುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. 


ಸಾಲ ಪಡೆದುಕೊಂಡ ಬಡ ವ್ಯಕ್ತಿಗಳು ಅಥವಾ ಕುಟುಂಬ ನಿರಂತರವಾಗಿ ಬಡ್ಡಿ ಕಂತುಗಳನ್ನು ಪಾವತಿಸುತ್ತಾ ಕಂಗಾಲಾಗುತ್ತಿರುವುದಲ್ಲದೆ ದುಬಾರಿ ಮೊತ್ತದ ಬಡ್ಡಿ ಕಂತು ಪಾವತಿಸಲು ತಪ್ಪಿದಲ್ಲಿ ಸಾಲ ನೀಡಿದವರ ದರ್ಪ, ಬೆದರಿಕೆ, ಧಮ್ಕಿ ಇವುಗಳನ್ನೂ ಎದುರಿಸುತ್ತಾ ಭಯದ ವಾತಾವರಣದಲ್ಲೇ ಜೀವಿಸುವ ಸನ್ನಿವೇಶ ಇಲ್ಲಿ ನಿರ್ಮಾಣವಾಗುತ್ತಿದೆ. ಕೆಲವೊಮ್ಮೆ ಇಂತಹ ಕೈ ಸಾಲ ನೀಡುವ ವ್ಯಕ್ತಿಗಳು ಗ್ಯಾಂಗ್ ವಾರ್ ಅಥವಾ ಅಪರಾಧ ಹಿನ್ನಲೆಯುಳ್ಳವರ ಹೆಸರು ಬಳಸಿ ಹೆದರಿಸುವ ಕೃತ್ಯಗಳೂ ನಡೆಯುತ್ತಿವೆ ಎನ್ನಲಾಗಿದೆ. ಅಲ್ಲದೆ ದುಬಾರಿ ಬಡ್ಡಿ ಕಂತು ಪಾವತಿಸಲು ವಿಳಂಬ ಅದರೆ ವ್ಯಕ್ತಿಗಳ, ವಾಹನಗಳ, ಸೊತ್ತುಗಳ ಅಪಹರಣ, ಬಲಾತ್ಕಾರದಂತಹ ಕೃತ್ಯಕ್ಕೂ ಕೈಹಾಕಲು ಹೇಸದ ಸನ್ನಿವೇಶಗಳೂ ನಡೆಯುತ್ತಿರುತ್ತದೆ ಎಂಬ ಮಾಹಿತಿಗಳೂ ಲಭ್ಯವಾಗುತ್ತಿದೆ.


ಇಂತಹ ಬಡ್ಡಿ ಮಾಫಿಯ ದಂಧೆ ನಡೆಸುವವರು ಸಮಾಜದಲ್ಲಿ ಧಾರ್ಮಿಕ ಸಂಸ್ಥೆಗಳ, ಧಾರ್ಮಿಕ, ಸಾಮಾಜಿಕ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಸಮಿತಿ ಸದಸ್ಯರುಗಳಾಗಿದ್ದುಕೊಂಡು ಪ್ರಭಾವಿ ಹಾಗೂ ಗೌರವಯುತರಂತೆ ಕಂಡುಬರುತ್ತಿದ್ದರೂ ಮಾಡುತ್ತಿರುವುದು ಮಾತ್ರ ಬಡವರ ರಕ್ತ ಹೀರುವ ಕೆಲಸವನ್ನಾಗಿದೆ. ಇಂತಹ ಕೃತ್ಯಕ್ಕೆ ತಮ್ಮ ಈ ಸ್ಥಾನಮಾನಗಳನ್ನೂ ಬಳಸಿಕೊಂಡು ಬಡವರನ್ನು ಹೆದರಿಸುವ ಕೆಲಸಕ್ಕೆ ಕೈಹಾಕುತ್ತಿರುವುದೂ ನಡೆಯುತ್ತದೆ ಎನ್ನಲಾಗಿದೆ. 


ಸಾಲ ಪಡೆಯುವ ವ್ಯಕ್ತಿಗಳು ಹಾಗೂ ಕುಟುಂಬಗಳು ಸ್ವಾಭಿಮಾನ, ಕುಟುಂಬದ ಗೌರವ ಹಾಗೂ ವೈಯುಕ್ತಿಕ ಅಭಿಮಾನಕ್ಕೆ ಹೆದರಿ ಎಂತಹದೇ ಕ್ಲಿಷ್ಟಕರ ಪರಿಸ್ಥಿತಿ ಎದುರಾದರೂ ಪೊಲೀಸ್ ಠಾಣೆ ಮೆಟ್ಟಿಲೇರಲು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲು ಹಿಂಜರಿಯುವ ಪ್ರಕರಣಗಳೇ ಜಾಸ್ತಿ. 


ಬಂಟ್ವಾಳದಲ್ಲಿ ಇತ್ತೀಚೆಗೆ ಜಾಸ್ತಿಯಾಗುತ್ತಿರುವ ಗಾಂಜಾ ಪ್ರಕರಣಗಳ ಬಗ್ಗೆ ನಿಯಂತ್ರಣಕ್ಕೆ ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆಗೆ ಇಳಿದಿರುವ ಪೊಲೀಸರು ಇಂತಹ ಬಡ್ಡಿ ಮಾಫಿಯಾಗಳ ಬಗ್ಗೆಯೂ ಸಮಗ್ರ ಮಾಹಿತಿ ಕಲೆ ಹಾಕಿ ಇವರ ಟಾರ್ಚರ್ ನಿಂದ ತೊಂದರೆ ಅನುಭವಿಸುತ್ತಿರು ಬಡವರ ಜೀವನಕ್ಕೆ ಭದ್ರತೆ ಒದಗಿಸಬೇಕಾಗಿದೆ. ಈಗಾಗಲೇ ಕೊರೋನಾ ಲಾಕ್ ಡೌನ್ ನಂತಹ ಕ್ಲಿಷ್ಟಕರ ಪರಿಸ್ಥಿತಿಯನ್ನು‌ ಎದುರಿಸಿ ಆರ್ಥಿಕ ಮೂಲ‌ ಕಳೆದುಕೊಂಡು ಜೀವನ ಜಂಜಾಟದಲ್ಲಿ ಮುಳುಗಿರುವ ಬಡವರು ಇಂತಹ ಮಾಫಿಯಾಗಳ ಕಪಿ ಮುಷ್ಠಿಗೆ ಸಿಲುಕಿ ಆತ್ಮಹತ್ಯೆಯಂತಹ ಅಪಾಯಕಾರಿ ನಿರ್ಧಾರಕ್ಕೆ ಮುಂದಾದರೆ ಸಂಬಂಧಪಟ್ಟ ಇಲಾಖೆಗಳು ಹಾಗೂ ಅಧಿಕಾರಿಗಳೇ ಹೊಣೆಯಾಗಬೇಕಾದೀತು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಇಲಾಖೆಯ ಕಣ್ಣು ತಪ್ಪಿಸಿ ರಾಜಾರೋಷವಾಗಿ ನಡೆಯುತ್ತಿದೆ ಬಡವರ ಜೀವ ಹಿಂಡುವ ಅಕ್ರಮ ಬಡ್ಡಿ ಮಾಫಿಯಾ? Rating: 5 Reviewed By: lk
Scroll to Top