ಮೂಲತಃ ಅಸೈಗೋಳಿ ನಿವಾಸಿ, ಬೊಗೋಡಿ ಫ್ರೂಟ್ಸ್ ಇಬ್ರಾಹಿಂ ಅವರ ದ್ವಿತೀಯ ಪುತ್ರಿಯ ಪತಿ
ಬಂಟ್ವಾಳ, ಜೂನ್ 07, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನಿವಾಸಿ ಉಮ್ಮರ್ ಫಾರೂಕ್ (40) ಹಠಾತ್ ಹೃದಯಾಘಾತದಿಂದ ಸೋಮವಾರ ತಡ ರಾತ್ರಿ ನಿಧನರಾಗಿದ್ದಾರೆ.
ಮೂಲತಃ ಕೊಣಾಜೆ ಸಮೀಪದ ಅಸೈಗೋಳಿ ನಿವಾಸಿಯಾಗಿರುವ ಇವರು ಬೋಗೋಡಿ ನಿವಾಸಿ ಫ್ರೂಟ್ಸ್ ವ್ಯಾಪಾರಿ ದಿವಂಗತ ಇಬ್ರಾಹಿಂ ಫ್ರೂಟ್ಸ್ ಅವರ ದ್ವಿತೀಯ ಪುತ್ರಿಯನ್ನು ವಿವಾಹವಾಗಿದ್ದು, ಇತ್ತೀಚೆಗೆ ಗುಡ್ಡೆಅಂಗಡಿಯ ಎ.ಆರ್. ಫ್ಲ್ಯಾಟಿನಲ್ಲಿ ಪತ್ನಿ-ಮಕ್ಕಳೊಂದಿಗೆ ವಾಸವಾಗಿದ್ದರು. ಸರಳ ಹಾಗೂ ಸೌಮ್ಯ ಸ್ವಭಾವ ಮೈಗೂಡಿಸಿಕೊಂಡು ಮಿತಭಾಷಿಯಾಗಿದ್ದ ಇವರು ಮಂಗಳೂರು-ಬೈಕಂಪಾಡಿಯ ಪ್ಲೈವುಡ್ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇತ್ತೀಚೆಗಷ್ಟೆ ತುಂಬೆಯಲ್ಲಿ ಹೊಸ ಮನೆ ನಿರ್ಮಾಣ ಮಾಡಿ ಮುಂದಿನ ತಿಂಗಳು ಗೃಹಪ್ರವೇಶ ಮಾಡುವವರಿದ್ದರು ಎನ್ನಲಾಗಿದೆ. ಕಳೆದ ಎರಡು ದಿನಗಳಿಂದ ಜ್ವರದಿಂದ ಇದ್ದು, ಸ್ಥಳೀಯ ವೈದ್ಯರಿಂದ ಔಷಧಿ ಪಡೆದು ಸೋಮವಾರವೂ ಕೆಲಸಕ್ಕೆ ತೆರಳಿ ಸಂಜೆ ಬಂದು ಮನೆಯಲ್ಲಿ ವಿಶ್ರಾಂತಿಗಾಗಿ ಮಲಗಿದ್ದ ವೇಳೆ ಹಠಾತ್ ಹೃದಯಾಘಾತಕ್ಕೊಳಗಾಗಿದ್ದಾರೆ ಎನ್ನಲಾಗಿದೆ. ತಕ್ಷಣ ಅವರನ್ನು ತುಂಬೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ. ಭಾನುವಾರವಷ್ಟೆ ತನ್ನ ಸಹೋದರಿಯ ಪುತ್ರಿಯ ವಿವಾಹ ಸಮಾರಂಭದಲ್ಲೂ ಪಾಲ್ಗೊಂಡಿದ್ದರು.
ಮೃತರು ಪತ್ನಿ, ಒಂದು ಗಂಡು, ಒಂದು ಹೆಣ್ಣು ಮಗು (ಇಬ್ಬರೂ ಅಪ್ರಾಪ್ತ ಮಕ್ಕಳು) ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
0 comments:
Post a Comment