ಬಂಟ್ವಾಳ, ಜೂನ್ 14, 2022 (ಕರಾವಳಿ ಟೈಮ್ಸ್) : ರಾಜಕಾರಣಕ್ಕಾಗಿ, ಮತ ಬ್ಯಾಂಕಿಗಾಗಿ ಧರ್ಮದಂಗಲ್ ನಡೆಸುವುದು ರಾಜಕೀಯ ಪಕ್ಷಗಳಿಗೆ ಶೋಭೆ ತರುವಂತದ್ದಲ್ಲ. ಓಟ್ ಬ್ಯಾಂಕಿಗಾಗಿ, ರಾಜಕೀಯ ಲಾಭ ಗಿಟ್ಟಿಸಿಕೊಳ್ಳುವುದಕ್ಕಾಗಿ ಜನರ ಮಧ್ಯೆ ಮತೀಯವಾದ, ಕೋಮುವಾದ, ವಿಭಾಗೀಯವಾದವನ್ನು ಉಂಟು ಮಾಡುವುದು ಸಹಿಸಲಸಾಧ್ಯ. ಈ ಬಗ್ಗೆ ಕಾನೂನಾತ್ಮಕವಾಗಿ ಜನ ಚಳುವಳಿ ಸಂಘಟಿಸುವ ಮೂಲಕ ಇಂತಹ ದುರುದ್ದೇಶಪೂರಿತ ರಾಜಕೀಯ ಹಿಡನ್ ಅಜೆಂಡಾಗಳನ್ನು ಹಿಮ್ಮೆಟ್ಟಿಸುವುದಾಗಿ ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಎಚ್ಚರಿಸಿದರು.
ವಿಶ್ವಾಸಿ ಸಮೂಹ ಪಾಣೆಮಂಗಳೂರು ಸೋಮವಾರ ಸಂಜೆ ಆಲಡ್ಕ ಪರಿಸರದಲ್ಲಿ ಆಯೋಜಿಸಲಾಗಿದ್ದ ಪ್ರವಾದಿ ಅವಹೇಳನ ಖಂಡಿಸಿ, ನಿಂದಕರ ವಿರುದ್ದ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಜನರ ಅಭ್ಯುದಯಕ್ಕಾಗಿ ಏನಾದರೂ ಅಭಿವೃದ್ದಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ, ಸ್ವಾರ್ಥ ರಹಿತವಾಗಿ ಜನರ ಹಿತದೃಷ್ಟಿ ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮತ ಯಾಚನೆ ನಡೆಸಿ ಚುನಾವಣೆ ಎದುರಿಸಬೇಕೇ ಹೊರತು ಸುಂದರ ಜಾತ್ಯಾತೀತ ಪರಂಪರೆ ಹೊಂದಿರುವ ಭಾರತದಲ್ಲಿ ಜನರನ್ನು ಸಂವಿಧಾನಕ್ಕೆ ವಿರುದ್ದವಾಗಿ ಮತೀಯವಾದ, ಕೋಮುವಾದದ ಮೂಲಕ ವಿಭಜಿಸಿ ಆ ಮೂಲಕ ರಾಜಕೀಯ ಲಾಭ ಗಳಿಸುವ ಪ್ರಯತ್ನ ನಡೆಸಿದರೆ ಅದು ದೇಶಕ್ಕೆ ಅಪಾಯ ತಂದೊಡ್ಡುವುದರ ಜೊತೆಗೆ ದೇಶದ ಜನರ ಅಸ್ತಿತ್ವಕ್ಕೂ ತೀವ್ರ ಆತಂಕ ತಂದೊಡ್ಡಲಿದೆ ಎಂದವರು ಆತಂಕ ವ್ಯಕ್ತಪಡಿಸಿದರು.
ರಾಜಕೀಯಕ್ಕಾಗಿ, ಮತ ಬ್ಯಾಂಕಿಗಾಗಿ ಇಂತಹ ಧರ್ಮದಂಗಲ್ ಮೂಲಕ ಜನರ ಮನಸ್ಸನ್ನು ವಿಭಜಿಸುವ ಕೃತ್ಯ ಯಾವುದೇ ಪಕ್ಷ ಮುಂದುವರಿಸಿದರೂ ಅದರ ವಿರುದ್ದ ಈ ದೇಶದ ಸಂವಿಧಾನ, ಜಾತ್ಯಾತೀಯ ಮೌಲ್ಯಗಳ ಮೇಲೆ ನಂಬಿಕೆ ಇರಿಸಿಕೊಂಡಿರುವ ಬಹುಸಂಖ್ಯಾತ ಮಂದಿಗಳು ಜನ ಚಳವಳಿ ನಡೆಸುವ ಮೂಲಕವಾದರೂ ಇಂತಹ ಹಿಡನ್ ಅಜೆಂಡಾಗಳನ್ನು ಹಿಮ್ಮೆಟ್ಟಿಸಿ ದೇಶದ ಬಹುತ್ವ ಸಂಸ್ಕøತಿಯನ್ನು ರಕ್ಷಿಸಲು ಕಾರ್ಯಪ್ರವೃತ್ತವಾಗಲಿದೆ ಎಂದು ಎಚ್ಚರಿಸಿದರು.
ಆಲಡ್ಕ ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಹಾಜಿ ಅಶ್ರಫ್ ಸಖಾಫಿ ಸವಣೂರು ಮಾತನಾಡಿ, ಜಗತ್ತಿನಲ್ಲೇ ಭಾರತ ದೇಶದ ಸಂವಿಧಾನ ಅತ್ಯಂತ ಸುಂದರ ಹಾಗೂ ಶ್ರೇಷ್ಠ ಸಂವಿಧಾನವಾಗಿದೆ. ದೇಶದ ಸಂವಿಧಾನದ ಆಶಯದಂತೆ ಇಲ್ಲಿ ಯಾರೂ ಮೇಲು-ಕೀಳಲ್ಲ. ಸರ್ವ ಜನಾಂಗವೂ ಇಲ್ಲಿ ಸಮಾನ ಅವಕಾಶಗಳನ್ನು ಪಡೆದಿದ್ದು, ಮತ-ಧರ್ಮ, ಜಾತಿ, ವರ್ಗಗಳ ಆಧಾರದಲ್ಲಿ ಏಕಸ್ವಾಮ್ಯತೆಯನ್ನು ಸಾಧಿಸಹೊರಡುವುದು ಅಥವಾ ಪೇಟೆಂಟ್ ಪಡೆದುಕೊಳ್ಳಲು ಕಾನೂನು ಮೀರಿ ಹವಣಿಸುವುದು ಒಪ್ಪತಕ್ಕದ್ದಲ್ಲ. ಈ ಹಿನ್ನಲೆಯಲ್ಲಿ ದೇಶದ ಸುಂದರ ಸಂವಿಧಾನಕ್ಕೆ ಅಪಚಾರ ಎಸಗುವ ಕೃತ್ಯಗಳನ್ನು ಕಾನೂನಾತ್ಮಕವಾಗಿ, ಶಾಂತಿ-ಸೌಹಾರ್ದತೆಯ ಮೂಲಕ ಹಿಮ್ಮೆಟ್ಟಿಸಲು ನಾವೆಲ್ಲರೂ ಕಟಿ ಬದ್ದರಾಗಬೇಕು ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಪರಿಸರದ ನೂರಾರು ಮಂದಿ ಭಾಗವಹಿಸಿ, ಶಾಂತಿಯುತವಾಗಿ, ಸಾಂಕೇತಿಕವಾಗಿ ಪ್ರವಾದಿ ವಿರುದ್ದ ನಡೆದ ಅವಮಾನಕರ ಹೇಳಿಕೆಯನ್ನು ಖಂಡಿಸಿದರು.
0 comments:
Post a Comment