ಬಂಟ್ವಾಳ, ಜುಲೈ 08, 2022 (ಕರಾವಳಿ ಟೈಮ್ಸ್) : ಅಡ್ಡಹೊಳೆ-ಬಿ ಸಿ ರೋಡು ಚತುಷ್ಪಥ ಹೆದ್ದಾರಿ ಕಾಮಗಾರಿ ಆರಂಭವಾದ ಬಳಿಕ ಅತೀ ಹೆಚ್ಚು ಬವಣೆ ಎದುರಿಸುತ್ತಿರುವುದು ಕಲ್ಲಡ್ಕ ಪೇಟೆಯಾಗಿದೆ. ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಸಂಸ್ಥೆಯ ತೀರಾ ಅವೈಜ್ಞಾನಿಕ ಹಾಗೂ ಮಲೆನಾಡು ಎಂಬ ಪರಿಜ್ಞಾನವೇ ಇಲ್ಲದೆ ನಡೆಸಲಾಗುತ್ತಿರುವ ಹೆದ್ದಾರಿ ಕಾಮಗಾರಿಯಿಂದಾಗಿ ಕಲ್ಲಡ್ಕ ಪೇಟೆ ಸಹಿತ ವಿವಿಧೆಡೆ ಸಾರ್ವಜನಿಕರು ನಿತ್ಯ ನಿರಂತರ ನರಕ ಯಾತನೆ ಅನುಭವಿಸುತ್ತಿದ್ದಾರೆ. ತಾಸುಗಟ್ಟಲೆ ಟ್ರಾಫಿಕ್ ಜಾಂ ಉಂಟಾಗುತ್ತಿದ್ದು, ವಾಹನ ಸವಾರರು ಅಕ್ಷರಶಃ ಸಮುದ್ರದಲ್ಲಿ ಸವಾರಿ ಮಾಡಿದ ಅನುಭವ ಪಡೆಯುವಂತಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹಿತ ಸಾರ್ವಜನಿಕರು ನಿತ್ಯವೂ ತಾವು ತಲುಪಬೇಕಾದ ಸ್ಥಳಕ್ಕೆ ಸಮಯಕ್ಕೆ ತಲುಪಲಾಗದೆ ಪರಿತಪಿಸುವಂತಾಗಿದೆ.
ಶುಕ್ರವಾರವಂತೂ ಇಲ್ಲಿನ ಟ್ರಾಫಿಕ್ ಜಾಂ ವಿಪರೀತವಾಗಿತ್ತು. ಶಾಲಾ-ಕಾಲೇಜು ರಜೆ ಇದ್ದು, ವಾಹನ ಸಂಚಾರ ವಿಪರೀತವಾಗಿಲ್ಲದಿದ್ದರೂ ಇಲ್ಲಿನ ಅವಸ್ಥೆ ನರಕಸಮಾನವಾಗಿತ್ತು. ಮುಂಜಾನೆ ಆರಂಭಗೊಂಡ ಕಲ್ಲಡ್ಕ ಪೇಟೆಯ ಹೆದ್ದಾರಿ ಅವ್ಯವಸ್ಥೆ ಮಧ್ಯಾಹ್ನದವರೆಗೂ ಮುಂದುವರಿದು ಪ್ರಯಾಣಿಕರು ಇಡೀ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಕಂಡು ಬಂತು.
ಮಲೆನಾಡು ಎಂಬ ಪರಿವೆಯೇ ಇಲ್ಲದೆ, ಮಲೆನಾಡಿಗೆ ಸಂಬಂಧಿಸಿದ ಯಾವುದೇ ಪೂರ್ವ ಪ್ಲ್ಯಾನ್ ಇಲ್ಲದೆ ಕಾಮಗಾರಿ ನಡೆಸುವ ಅಭಿಯಂತರರ ವೈಫಲ್ಯವೇ ಇಂತಹ ಅವ್ಯವಸ್ಥೆಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದ, ಮಳೆಯೇ ಬಾರದ ಊರಿನ ಇಂಜಿನಿಯರ್‍ಗಳು ನಿರಂತರ ಮಳೆ ಸುರಿಯುವ ನಾಡಿನ ಕಾಮಗಾರಿಗಳಿಗೆ ಅದೇಗೆ ಯೋಜನೆ ರೂಪಿಸುವ ತಂತ್ರಗಾರಿಕೆ ಹೊಂದುತ್ತಾರೆ ಎಂದು ಅಭಿಪ್ರಾಯಪಡುವ ಸಾರ್ವಜನಿಕರು ಸ್ಥಳೀಯ ಮಲೆನಾಡು ಪ್ರದೇಶದವರೇ ಆದ ಅಭಿಯಂತರರು ಹಾಗೂ ಗುತ್ತಿಗೆದಾರರಿಗೆ ಕಾಮಗಾರಿಯ ಹೊಣೆ ವಹಿಸಿಕೊಟ್ಟರೆ ಸಮಸ್ಯೆಗೆ ಪರಿಹಾರ ದೊರಕೀತೋ ಏನೋ ಎಂದು ಮಾತಾಡಿಕೊಳ್ಳುವಂತಾಗಿದೆ.
ಅವ್ಯವಸ್ಥೆಯಿಂದಾಗಿ ತುರ್ತು ಕಾರ್ಯಗಳಿಗೆ ತೆರಳುವವರು, ಅಂಬ್ಯುಲೆನ್ಸ್ ಮೂಲಕ ತೆರಳುವ ಗಂಭೀರ ಕಾಯಿಲೆಯ ರೋಗಿಗಳು ತೀವ್ರ ಬವಣೆ ಎದುರಿಸುವಂತಾಗಿದೆ. ಇಷ್ಟೆಲ್ಲಾ ಅವ್ಯವಸ್ಥೆಯ ಆಗರವಾಗಿ ಪೇಟೆಯ ಜನ ಬಸವಳಿದಿದ್ದರೂ ಯಾವೊಬ್ಬ ಜನಪ್ರತಿನಿಧಿಯಾಗಲೀ, ಅಧಿಕಾರಿ ವರ್ಗವಾಗಲೀ, ಗುತ್ತಿಗೆ ಸಂಸ್ಥೆಯವರಾಗಲೀ ಸಾರ್ವಜನಿಕರ ಪರವಾಗಿ ಒಂದಿನಿತೂ ಕಾಳಜಿ ವಹಿಸಿದಂತೆ ಕಂಡು ಬರುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಗಳತೆಯ ದೂರದಲ್ಲಿ ಸಂಚಾರಿ ಪೊಲೀಸ್ ಠಾಣೆಯಿದ್ದರೂ ಯಾವುದೇ ಒಬ್ಬ ಟ್ರಾಫಿಕ್ ಪೊಲೀಸ್ ಅಧಿಕಾರಿಯಾಗಲೀ, ಸಿಬ್ಬಂದಿಯಾಗಲೀ ಇಲ್ಲಿನ ನಿತ್ಯ ಸಮಸ್ಯೆಯನ್ನು ನಿಭಾಯಿಸುವ ಮನೋಸ್ಥಿತಿಯನ್ನೂ ತೋರುತ್ತಿಲ್ಲ ಎಂಬುದು ಜನರ ಆಕ್ರೋಶಕ್ಕೆ ಮತ್ತೊಂದು ಕಾರಣ.
0 comments:
Post a Comment