ಸುಳ್ಯ, ಆಗಸ್ಟ್ 31, 2022 (ಕರಾವಳಿ ಟೈಮ್ಸ್) : ತಾಲೂಕಿನ ಸುಳ್ಯ-ಕಸಬಾ ಗ್ರಾಮದ ಕೊಡಿಯಾಲಬೈಲು ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಬಿಕಾಂ ಪದವಿ ವಿದ್ಯಾರ್ಥಿ, ಜಾಲ್ಸೂರು ಗ್ರಾಮದ ಸೋಣಂಗೇರಿ-ಪೈಚಾರು ನಿವಾಸಿ ಮಹಮ್ಮದ್ ಸನೀಫ್ (19) ಎಂಬಾತ ತನ್ನ ಪರಿಚಯದ ಸ್ನೇಹಿತೆ ಅದೇ ಕಾಲೇಜಿನ ವಿದ್ಯಾರ್ಥಿನಿ ಪಲ್ಲವಿ ಎಂಬಾಕೆಯೊಂದಿಗೆ ಮಾತನಾಡಿದ ಕಾರಣಕ್ಕೆ ಆರೋಪಿಗಳಾದ ಅದೇ ಕಾಲೇಜಿನ ಇತರ ವಿದ್ಯಾರ್ಥಿಗಳು ಹಲ್ಲೆ ನಡೆಸಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ನಡೆಸಿದ ಆರೋಪಿ ವಿದ್ಯಾರ್ಥಿಗಳನ್ನು ದೀಕ್ಷಿತ್, ಧನುಷ್, ಪ್ರಜ್ವಲ್ (ಅಂತಿಮ ವರ್ಷದ ಬಿಬಿಎ), ತನುಜ್ (ಅಂತಿಮ ವರ್ಷದ ಬಿಕಾಂ), ಅಕ್ಷಯ್ (ದ್ವಿತಿಯ ವರ್ಷದ ಬಿಕಾಂ), ಮೋಕ್ಷಿತ್ (ಅಂತಿಮ ವರ್ಷದ ಬಿಕಾಂ), ಗೌತಮ್ ( ಎನ್ ಎಂ ಸಿ ಕಾಲೇಜ್) ಹಾಗೂ ಇತರರು ಎಂದು ಹೆಸರಿಸಲಾಗಿದೆ.
ವಿದ್ಯಾರ್ಥಿಗಳಾದ ಸನೀಫ್ ಹಾಗೂ ಪಲ್ಲವಿ ಅವರು ಒಟ್ಟಿಗೆ ಮಾತನಾಡುವುದನ್ನು ಇಷ್ಟವಿಲ್ಲದ ಕಾರಣ ಮಂಗಳವಾರ (ಆಗಸ್ಟ್ 30) ಬೆಳಿಗ್ಗೆ 10:30 ರ ವೇಳೆಗೆ ಸನೀಫ್ ತರಗತಿಯಲ್ಲಿದ್ದಾಗ ಅದೇ ಕಾಲೇಜಿನಲ್ಲಿ ಓದುತ್ತಿದ್ದ ಅಂತಿಮ ವರ್ಷದ ಬಿಬಿಎ ವಿಧ್ಯಾರ್ಥಿಗಳಾದ ದೀಕ್ಷಿತ್ ಮತ್ತು ಧನುಷ್ ಎಂಬವರು ತರಗತಿಯಿಂದ ಆತನನ್ನು ಮಾತನಾಡಲಿಕ್ಕಿದೆ ಎಂದು ಹೇಳಿ ಕಾಲೇಜಿನ ಮೈದಾನಕ್ಕೆ ಕರೆದುಕೊಂಡು ಹೋಗಿ ಅಲ್ಲೇ ಇದ್ದ ಅದೇ ಕಾಲೇಜಿನ ಇತರ ವಿದ್ಯಾರ್ಥಿಗಳಾದ ಪ್ರಜ್ವಲ್, (ಅಂತಿಮ ವರ್ಷದ ಬಿಬಿಎ) ತನುಜ್ (ಅಂತಿಮ ವರ್ಷದ ಬಿಕಾಂ) ಅಕ್ಷಯ್ (ದ್ವಿತಿಯ ವರ್ಷದ ಬಿಕಾಂ) ಮೋಕ್ಷಿತ್ (ಅಂತಿಮ ವರ್ಷದ ಬಿಕಾಂ) ಹಾಗೂ ಸುಳ್ಯದ ಎನ್ ಎಂ ಸಿ ಕಾಲೇಜಿನ ಗೌತಮ್ ಮತ್ತು ಇತರರು ಕಾಲರ್ ಪಟ್ಟಿ ಹಿಡಿದು ನೀನು ಪಲ್ಲವಿ ಒಟ್ಟಿಗೆ ಯಾಕೆ ಮಾತನಾಡುತ್ತಿಯಾ ಎಂದು ಹೇಳುತ್ತಾ, ಅವರ ಕೈಯಲ್ಲಿದ್ದ ದೊಣ್ಣೆಯಿಂದ ಬೆನ್ನಿಗೆ ಹೊಡೆದು ನೆಲಕ್ಕೆ ದೂಡಿಹಾಕಿ ಕಾಲಿನಿಂದ ತುಳಿದು ಮುಂದಕ್ಕೆ ಪಲ್ಲವಿಯೊಂದಿಗೆ ಮಾತನಾಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ.
ಹಲ್ಲೆಗೊಳಗಾ ವಿದ್ಯಾರ್ಥಿ ಸಾನಿಫ್ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 96/22 ಕಲಂ 143, 147, 148, 323, 324, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment