ಸಿಇಟಿ ರ‍್ಯಾಂಕಿಂಗ್ ಪಟ್ಟಿ ರದ್ದುಗೊಳಿಸಿ ಹೈಕೋರ್ಟ್ ಆದೇಶ : 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ಹೊಸ  ರ‍್ಯಾಂಕಿಂಗ್‌ ಪಟ್ಟಿ ಪ್ರಕಟಿಸುವಂತೆ ಕೆಎಇಗೆ ಕೋರ್ಟ್‌ ನಿರ್ದೇಶನ  - Karavali Times ಸಿಇಟಿ ರ‍್ಯಾಂಕಿಂಗ್ ಪಟ್ಟಿ ರದ್ದುಗೊಳಿಸಿ ಹೈಕೋರ್ಟ್ ಆದೇಶ : 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ಹೊಸ  ರ‍್ಯಾಂಕಿಂಗ್‌ ಪಟ್ಟಿ ಪ್ರಕಟಿಸುವಂತೆ ಕೆಎಇಗೆ ಕೋರ್ಟ್‌ ನಿರ್ದೇಶನ  - Karavali Times

728x90

3 September 2022

ಸಿಇಟಿ ರ‍್ಯಾಂಕಿಂಗ್ ಪಟ್ಟಿ ರದ್ದುಗೊಳಿಸಿ ಹೈಕೋರ್ಟ್ ಆದೇಶ : 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ಹೊಸ  ರ‍್ಯಾಂಕಿಂಗ್‌ ಪಟ್ಟಿ ಪ್ರಕಟಿಸುವಂತೆ ಕೆಎಇಗೆ ಕೋರ್ಟ್‌ ನಿರ್ದೇಶನ 

 ಬೆಂಗಳೂರು, ಸೆಪ್ಟೆಂಬರ್ 04, 2022 (ಕರಾವಳಿ ಟೈಮ್ಸ್):  ಮರು ಪರೀಕ್ಷೆ ಬರೆದ ಅಭ್ಯರ್ಥಿಗಳ ಪ್ರಸಕ್ತ ಸಾಲಿನ ಸಿಇಟಿ ಅಂಕಗಳ ಜೊತೆ ಕಳೆದ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ಹೊಸ ಸಿಇಟಿ ರ‍್ಯಾಂಕಿಂಗ್‌ ಪಟ್ಟಿ ಪ್ರಕಟಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಹೈಕೋರ್ಟ್‌ ನಿರ್ದೇಶನ ನೀಡಿದೆ. ಜುಲೈ 30 ರಂದು ಹೊರಡಿಸಲಾಗಿದ್ದ 2021-2022ರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವನ್ನು ರದ್ದುಪಡಿಸಿರುವ ಹೈಕೋರ್ಟ್‌, ಕೋರ್ಸ್‌ಗಳ ಪ್ರವೇಶಾತಿಗೆ ಮರು ಪರೀಕ್ಷೆ (ಸಿಇಟಿ) ಬರೆದ ಎಲ್ಲ ವಿದ್ಯಾರ್ಥಿಗಳ ಪಿಯುಸಿ ಪರೀಕ್ಷೆಯ ಶೇ. 50 ಅಂಕ ಹಾಗೂ ಸಿಇಟಿಯಲ್ಲಿ ಪಡೆದಿರುವ ಶೇ. 50 ಅಂಕ ಪರಿಗಣಿಸಿ ಹೊಸದಾಗಿ ರ‍್ಯಾಂಕ್‌ ಪಟ್ಟಿ ಪ್ರಕಟಿಸುವಂತೆ ಆದೇಶಿಸಿದೆ.

ನ್ಯಾಯಾಲಯದ ಈ ತೀರ್ಪಿನಿಂದ 2020-21ರ ಸಾಲಿನ ಸುಮಾರು 21 ಸಾವಿರ ಮರು ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಅದೇ ರೀತಿ 2021-2022ರ ಸಾಲಿನ ಸಿಇಟಿ ರ‍್ಯಾಂಕಿಂಗ್‌ನಲ್ಲಿ ಭಾರಿ ಏರು ಪೇರಾಗುವ ಸಾಧ್ಯತೆಯಿದೆ.

2020-21ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳು ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸುವುದಿಲ್ಲ ಎಂದು ಕೆಇಎ ಹೊರಡಿಸಿದ್ದ ಟಿಪ್ಪಣಿಯನ್ನು ಪ್ರಶ್ನಿಸಿ ಪ್ರತ್ಯೇಕವಾಗಿ ಸಲ್ಲಿಕೆಯಾಗಿದ್ದ ಏಳು ಅರ್ಜಿಗಳನ್ನು ಒಟ್ಟು ಸೇರಿಸಿ ವಿಚಾರಣೆ ನಡೆಸಿದ ನ್ಯಾ. ಎಸ್‌. ಆರ್‌. ಕೃಷ್ಣ ಕುಮಾರ್‌ ಅವರ ಏಕಸದಸ್ಯ ನ್ಯಾಯಪೀಠವು ಈ ಮಹತ್ವದ ಆದೇಶ ಪ್ರಕಟಿಸಿದೆ.

2021ರಲ್ಲಿ ಪಿಯುಸಿಯಲ್ಲಿ ಪಡೆದ ಅಂಕಗಳನ್ನು 2022-23ರ ಸಾಲಿನ ಇನ್ನಿತರ ಪದವಿಗಳ ಪ್ರವೇಶಕ್ಕೆ ಪರಿಗಣಿಸಲಾಗಿದೆ. ಆದರೆ ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ಕೋರ್ಸ್‌ಗಳಿಗೆ ಪರಿಗಣಿಸುವುದಿಲ್ಲ ಎಂಬ ಕೆಇಎಯ ಟಿಪ್ಪಣಿ ವಿವೇಚನಾ ರಹಿತ, ಅತಾರ್ಕಿಕ ಮತ್ತು ನ್ಯಾಯಸಮ್ಮತವಾಗಿಲ್ಲ ಎಂದು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

2021ನೇ ಸಾಲಿನ ಪಿಯು ಅಂಕಗಳನ್ನು ಈ ಬಾರಿ ರ‍್ಯಾಂಕಿಂಗ್‌ಗೆ ಪರಿಗಣಿಸುವುದಿಲ್ಲ ಎಂದು ಕೆಇಎಯು ಸಿಇಟಿ ರ್ಯಾಂಕಿಂಗ್‌ ಪ್ರಕಟಿಸುವಾಗ ಟಿಪ್ಪಣಿ ಹೊರಡಿಸಿದೆ. ಇದು ಸರಿಯಲ್ಲ. ಆಯ್ಕೆ ಪ್ರಕ್ರಿಯೆಯ ಅಂತಿಮ ಹಂತದಲ್ಲಿ ಹೊಸ ಮಾನದಂಡವನ್ನು ಘೋಷಿಸುವಂತಿಲ್ಲ. 2022ರ ಎಪ್ರಿಲ 18 ರಿಂದ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಜುಲೈ 30 ರಂದು ಮುಕ್ತಾಯ ಹಂತದಲ್ಲಿದ್ದಾಗ ಈ ಘೋಷಣೆ ಮಾಡಿದ್ದು ಕಾನೂನು ಬಾಹಿರ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

2022ನೇ ಸಾಲಿನ ಸಿಇಟಿಗೆ ಸಂಬಂಧಿಸಿ ಕೆಇಎ ಹೊರಡಿಸಿರುವ ಬುಲೆಟಿನ್‌ನಲ್ಲಿ ಅರ್ಹತೆ, ವಿದ್ಯಾರ್ಹತೆ, ಮೆರಿಟ್‌ ಮತ್ತಿತರ ಅಂಶಗಳನ್ನು ಉಲ್ಲೇಖಿಸಲಾಗಿದೆ. ಇದರಲ್ಲಿ ದ್ವಿತೀಯ ಪಿಯುಸಿ ಹಾಗೂ ಸಿಇಟಿ ಎರಡೂ ಪರೀಕ್ಷೆಗಳಲ್ಲಿ ಪಡೆದ ಅಂಕಗಳನ್ನು ಸಮಾನ ಪ್ರಮಾಣದಲ್ಲಿ ಪರಿಗಣಿಸುವ ಬಗ್ಗೆ ಹೇಳಲಾಗಿದೆಯೇ ಹೊರತು, 2021ನೇ ಸಾಲಿನ ಅಂಕಗಳನ್ನು ಪರಿಗಣಿಸದೇ ಇರುವ ಬಗ್ಗೆ ತಿಳಿಸಿಲ್ಲ. 2021 ರಲ್ಲಿ ಪಿಯು ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಅವರ ಪಿಯು ಅಂಕಗಳನ್ನು 2022ನೇ ಸಾಲಿನ ಸಿಇಟಿ ರ‍್ಯಾಂಕ್‌ಗೆ ಪರಿಗಣಿಸಲಾಗುವುದಿಲ್ಲ ಎಂದು ಕೆಇಎ ಮೊದಲೇ ಮಾಹಿತಿ ನೀಡಿಲ್ಲ. 2022ರ ಜುಲೈ 30 ರಂದು ಟಿಪ್ಪಣಿ ಹೊರಡಿಸುವವರೆಗೂ ವಿದ್ಯಾರ್ಥಿಗಳಿಗೆ ಆ ಬಗ್ಗೆ ಯಾವುದೇ ಮಾಹಿತಿಯೇ ಇರಲಿಲ್ಲ. ಪರೀಕ್ಷಾ ಪ್ರಾಧಿಕಾರದ ಈ ಕ್ರಮ ಅರ್ಜಿದಾರರು ಹಾಗೂ ಇತರ ಪುನರಾವರ್ತಿತ ವಿದ್ಯಾರ್ಥಿಗಳನ್ನು ಅವಕಾಶ ವಂಚಿತರನ್ನಾಗಿಸುತ್ತದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ 2020-21ನೇ ಸಾಲಿನಲ್ಲಿ ಕೆಇಎ ಸಿಇಟಿ ಪರೀಕ್ಷೆಯನ್ನು ನಡೆಸಿತ್ತು. ಆದರೆ, ಅದೇ ಸಾಲಿನಲ್ಲಿ ಈ ರೀತಿಯ ಟಿಪ್ಪಣಿಯನ್ನು ಹೊರಡಿಸಿಲ್ಲ. ಆದರೆ, 2022-23ನೇ ಸಾಲಿಗೆ ಮಾತ್ರ ಈ ರೀತಿಯ ಟಿಪ್ಪಣಿ ಹೊರಡಿಸಲಾಗಿದೆ. ಈ ರೀತಿಯ ಟಿಪ್ಪಣಿಯನ್ನು ಈ ಹಿಂದೆ ಹೊರಡಿಸಿಲ್ಲ. ಮುಂದಿನ ದಿನಗಳಲ್ಲಿಯೂ ಹೊರಡಿಸುವುದಿಲ್ಲ ಎಂದು ಹೇಳಲಾಗಿತ್ತು. ಇದು ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಸೀಟುಗಳಿಗೆ ಪ್ರವೇಶಕ್ಕಾಗಿ ಅಭ್ಯರ್ಥಿಗಳ ಆಯ್ಕೆ ನಿಯಮ- 2006ದ ವಿರುದ್ಧವಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ನ್ಯಾಯಾಲಯವು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಹೊಸತಾಗಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಹಾಗೂ ಹಿಂದಿನ ವರ್ಷದ ವಿದ್ಯಾರ್ಥಿಗಳು, ಈ ಎರಡೂ ಕಡೆಯವರ ವಾದವನ್ನು ಆಲಿಸಿ ಅರ್ಜಿದಾರ ವಿದ್ಯಾರ್ಥಿಗಳು ಸಿಇಟಿಯಲ್ಲಿ ಪಡೆದಿರುವ ಶೇ. 75 ಅಂಕ ಮತ್ತು ಪಿಯು ಪರೀಕ್ಷೆಯಲ್ಲಿ ಪಡೆದಿರುವ ಶೇ. 25 ರಷ್ಟು ಅಂಕ ಪರಿಗಣಿಸಿ ರ್ಯಾಂಕಿಂಗ್‌ ಪಟ್ಟಿ ಪ್ರಕಟಿಸಲು ಸಾಧ್ಯವೇ ಎಂಬ ಬಗ್ಗೆ ತನ್ನ ನಿಲುವು ತಿಳಿಸುವಂತೆ ಕೆಇಎಗೆ ತಿಳಿಸಿತ್ತು. ಆದರೆ ಇದನ್ನು ಕೆಇಎ ಒಪ್ಪಿರಲಿಲ್ಲ.

  • Blogger Comments
  • Facebook Comments

0 comments:

Post a Comment

Item Reviewed: ಸಿಇಟಿ ರ‍್ಯಾಂಕಿಂಗ್ ಪಟ್ಟಿ ರದ್ದುಗೊಳಿಸಿ ಹೈಕೋರ್ಟ್ ಆದೇಶ : 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ಹೊಸ  ರ‍್ಯಾಂಕಿಂಗ್‌ ಪಟ್ಟಿ ಪ್ರಕಟಿಸುವಂತೆ ಕೆಎಇಗೆ ಕೋರ್ಟ್‌ ನಿರ್ದೇಶನ  Rating: 5 Reviewed By: karavali Times
Scroll to Top