ಪುತ್ತೂರು, ಸೆಪ್ಟೆಂಬರ್ 18, 2022 (ಕರಾವಳಿ ಟೈಮ್ಸ್) : ಇಲ್ಲಿನ ಸಂತ ಫಿಲೋಮಿನಾ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ, ಉಪ್ಪಿನಂಗಡಿ ನಿವಾಸಿ ಸಲಾಂ ಅವರ ಪುತ್ರ ಸಿಝಾನ್ ಹಸನ್ ನಿಂತಿದ್ದ ಬಸ್ ಹಿಮ್ಮುಖವಾಗಿ ಚಲಿಸುತ್ತಿದ್ದ ವೇಳೆ ಸಮಯ ಪ್ರಜ್ಞೆ ಹಾಗೂ ಧೈರ್ಯ ತೋರಿ ತಕ್ಷಣ ಬಸ್ಸಿನ ಡ್ರೈವರ್ ಸೀಟಿಗೆ ಬಂದು ಬ್ರೇಕ್ ಹಾಕಿ ಸಂಭಾವ್ಯ ಅನಾಹುತದಿಂದ ಹಲವು ಮಂದಿಯನ್ನು ಪಾರು ಮಾಡಿದ್ದು, ಇದೀಗ ವಿದ್ಯಾರ್ಥಿಯ ಸಮಯ ಪ್ರಜ್ಞೆ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.
ಗುರುವಾರ (ಸೆ 15) ಘಟನೆ ನಡೆದಿದ್ದು, ಸಂಜೆ 4.25 ರ ಸುಮಾರಿಗೆ ಕಾಲೇಜು ತರಗತಿ ಮುಗಿಸಿ ಮನೆಗೆ ಹೋಗಲು ಪುತ್ತೂರು ಬಸ್ ನಿಲ್ದಾಣಕ್ಕೆ ವಿದ್ಯಾರ್ಥಿ ಸಿಝಾನ್ ಹಸನ್ ಬಂದಿದ್ದು, ಬಸ್ ನಿಲ್ದಾಣದಲ್ಲಿ ನಿಂತಿದ್ದ ಪುತ್ತೂರು-ಧರ್ಮಸ್ಥಳ ವೇಗದೂತ ಬಸ್ಸಿಗೆ ಎಲ್ಲ ವಿದ್ಯಾರ್ಥಿಗಳ ಸಹಿತ ಸೀಝಾನ್ ಹಸನ್ ಕೂಡಾ ಹತ್ತಿ ಕುಳಿತಿದ್ದ. ಬಸ್ಸಿನಿಂದ ಚಾಲಕ-ನಿರ್ವಾಹಕರು ಇಳಿದು ಒಂದಷ್ಟು ದೂರ ತೆರಳಿದ್ದರು.
ವಿದ್ಯಾರ್ಥಿಗಳ ಸಹಿತ ಪ್ರಯಾಣಿಕರೆಲ್ಲ ಬಸ್ಸಿನಲ್ಲಿ ಕುಳಿತಿದ್ದ ವೇಳೆ ಬಸ್ಸು ಏಕಾಏಕಿ ನಿಂತಲ್ಲಿಂದ ರಿವರ್ಸ್ ಹಿಮ್ಮುಖವಾಗಿ ಚಲಿಸಲಾರಂಭಿಸಿದೆ. ಈ ಸಂದರ್ಭ ಬಸ್ಸು ಪ್ರಯಾಣಿಕರೆಲ್ಲರೂ ಆತಂಕ ಪಡುತ್ತಿದ್ದ ಮಧ್ಯೆ ಬಸ್ಸಿನ ಚಾಲಕ ಸೀಟಿನ ಹಿಂದಿನ ಆಸನದಲ್ಲಿ ಕುಳಿತಿದ್ದ ವಿದ್ಯಾರ್ಥಿ ಸಿಝಾನ್ ಹಸನ್ ತಕ್ಷಣ ಚಾಲಕನ ಆಸನಕ್ಕೆ ತೆರಳಿ ಬ್ರೇಕ್ ಒತ್ತಿದ್ದಾನೆ. ವಿದ್ಯಾರ್ಥಿಯ ಸಮಯ ಪ್ರಜ್ಞೆಯಿಂದ ಹಿಮ್ಮುಖವಾಗಿ ಚಲಿಸುತ್ತಿದ್ದ ಬಸ್ ಅಲ್ಲೇ ನಿಂತಿದೆ. ಇದೇ ವೇಳೆ ಅಲ್ಲೇ ಇದ್ದ ಇನ್ನೊಂದು ಬಸ್ಸಿನ ನಿರ್ವಾಹಕ ಬಸ್ ಹತ್ತಿ ಹ್ಯಾಂಡ್ ಬ್ರೇಕ್ ಕೂಡಾ ಹಾಕಿದ್ದಾರೆ. ಒಟ್ಟಾರೆ ಸಂಭಾವ್ಯ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದಂತಾಗಿದೆ.
ಪ್ರಥಮ ಪಿಯುಸಿಯ ಅಪ್ರಾಪ್ತ ವಿದ್ಯಾರ್ಥಿಯಾಗಿದ್ದರೂ ತನ್ನ ಬುದ್ದಿ ಶಕ್ತಿ ಹಾಗೂ ಸಮಯ ಪ್ರಜ್ಞೆಯಿಂದ ಸಿಝಾನ್ ಹಸನ್ ಬಸ್ಸಿನಲ್ಲಿದ್ದ ಹಲವರಿಗೆ ಎದುರಾಗುವ ಅಪಾಯವನ್ನು ತಪ್ಪಿಸಿದ್ದು, ಇದೀಗ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.
ವಿದ್ಯಾರ್ಥಿ ಸಿಝಾನ್ ಹಸನ್ ಸಮಯ ಪ್ರಜ್ಞೆ ಹಾಗೂ ಧೈರ್ಯವನ್ನು ಸಂತ ಫಿಲೋಮಿನ ಪಿಯು ಕಾಲೇಜು ಪ್ರಾಂಶುಪಾಲ ಫಾದರ್ ಅಶೋಕ್ ರಾಯನ್ ಕ್ರಾಸ್ತ ಸಹಿತ ಸಾರ್ವಜನಿಕರ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲೇ ಇಂತಹ ಧೈರ್ಯಶಾಲಿ ಕೆಲಸ ಮಾಡಿದಾಗ ಸಮಾಜದಲ್ಲಿ ಮುಂದೆ ಸಮಾಜಮುಖಿ ಕೆಲಸಗಳನ್ನು ಮಾಡಲು ಸಹಕಾರಿಯಾಗುತ್ತದೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
0 comments:
Post a Comment