ಬಂಟ್ವಾಳ, ನವೆಂಬರ್, 10, 2022 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭಾಧಿಕಾರಿಗಳ ಬದ್ದತೆ ರಹಿತ ವರ್ತನೆ ಕಾರಣದಿಂದಾಗಿ ಬಸ್ ಹಾಗೂ ಅಟೋ ರಿಕ್ಷಾ ನಿಲ್ದಾಣದ ಹೆಸರಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು-ಕಾರ್ಯಕರ್ತರು ಪರಸ್ಪರ ಚಕಮಕಿ ನಡೆಸುವಂತಹ ಸನ್ನಿವೇಶಕ್ಕೆ ಬಂಟ್ವಾಳ-ಬೈಪಾಸ್ ಬಳಿಯ ತುಂಬ್ಯ ಜಂಕ್ಷನ್ ಬುಧವಾರ ಸಾಕ್ಷಿಯಾಗಿದೆ.
ಇಲ್ಲಿನ ಪುರಸಭಾ ವ್ಯಾಪ್ತಿಯ ಬಂಟ್ವಾಳ-ಬೈಪಾಸ್ ತುಂಬ್ಯ ಜಂಕ್ಷನ್ನಿನಲ್ಲಿ ಅಟೋ ರಿಕ್ಷಾ ನಿಲ್ದಾಣ ನಿರ್ಮಾಣಕ್ಕೆ ವಿಧಾನಪರಿಷತ್ ಸದಸ್ಯ ಯು ಟಿ ವೆಂಕಟೇಶ್ ಅವರ ಅನುದಾನ ಮಂಜೂರುಗೊಂಡಿದ್ದು, ಇದರ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಆದೇಶದಂತೆ ಪುರಸಭೆ ಶರ್ತಬದ್ದ ಅನುಮತಿ ನೀಡಿತ್ತು. ಇನ್ನೇನು ಕಾಮಗಾರಿ ಆರಂಭವಾಗಲಿದೆ ಎನ್ನುವಷ್ಟರಲ್ಲಿ ಪುರಸಭಾಧಿಕಾರಿಗಳು ಹಠಾತ್ ಆಗಿ ಕಾಮಗಾರಿ ನಡೆಸದಂತೆ ಅಟೋ ನಿಲ್ದಾಣ ಕಾಮಗಾರಿ ನಡೆಸುವ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ. ಇಲ್ಲಿ ಸಮಸ್ಯೆ ಆರಂಭವಾಗಿದೆ.
ಇಲ್ಲಿ ಬಸ್ಸು ನಿಲ್ದಾಣ ಇದ್ದು, ಅಟೋ ನಿಲ್ದಾಣ ಅಗತ್ಯ ಇಲ್ಲ ಎಂದು ಬಿಜೆಪಿ ನಾಯಕರು ವಾದಿಸಿದರೆ, ಬಸ್ಸು ನಿಲ್ದಾಣ ಬೇರೆ, ಅಟೋ ನಿಲ್ದಾಣ ಬೇರೆ. ಅದನ್ನು ನಿರ್ಮಿಸಿದರೆ ಕೇಡೇನು? ಅಲ್ಲಿ ಅಲ್ಲದಿದ್ದರೂ ಪರವಾಗಿಲ್ಲ ಸೂಕ್ತ ಸ್ಥಳ ಸೂಚಿಸಿ. ಅಲ್ಲೇ ನಿರ್ಮಾಣ ಮಾಡುತ್ತೇವೆ ಎಂಬುದು ಕೈ ನಾಯಕರ ವಾದ. ಎರಡೂ ಪಕ್ಷಗಳ ನಾಯಕರು ಸ್ಥಳದಲ್ಲಿ ಜಮಾಯಿಸಿದ ಪರಿಣಾಮ ಮಾತಿನ ವಿನಿಮಯ ನಡೆದು ಪರಿಸ್ಥಿತಿ ಕೈ ಮೀರುವ ಹಂತಕ್ಕೂ ಬಂದಿದೆ ಎನ್ನಲಾಗಿದೆ. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವ ಅನಿವಾರ್ಯತೆ ಎದುರಾಗಿದೆ.
ಬಂಟ್ವಾಳ ಪುರಸಭೆಯ ಅಧಿಕಾರಿಗಳು ಸೂಕ್ತ ಸಮಯದಲ್ಲಿ ಸ್ಪಷ್ಟ ನಿರ್ಧಾರ ಕೈಗೊಂಡಿದ್ದೇ ಆದಲ್ಲಿ ಇಲ್ಲಿ ರಾಜಕೀಯ ಘರ್ಷಣೆಗೆ ಅವಕಾಶ ಇರಲಿಲ್ಲ. ಅಧಿಕಾರಿಗಳ ಬದ್ದತೆ ರಹಿತ ನಡವಳಿಕೆಯಿಂದಾಗಿ ರಾಜಕೀಯ ಪಕ್ಷಗಳ ನಾಯಕರು ಜಂಘೀ ಕುಸ್ತಿಗಿಳಿಯುವ ಸನ್ನಿವೇಶ ಇಲ್ಲಿ ನಿರ್ಮಾಣವಾಗಿ ಜನ ಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
0 comments:
Post a Comment