ಬಂಟ್ವಾಳ, ನವೆಂಬರ್ 11, 2022 (ಕರಾವಳಿ ಟೈಮ್ಸ್) : ತಾಲೂಕಿನ ಬ್ರಹ್ಮರಕೂಟ್ಲು ಬಂಟರ ಭವನ ಬಳಿ ನೇತ್ರಾವತಿ ನದಿ ನೀರಿನಲ್ಲಿ ಸ್ನಾನಕ್ಕಿಳಿದ ಶಾಲಾ ವಿದ್ಯಾರ್ಥಿಗಳ ಪೈಕಿ ಬಿ ಸಿ ರೋಡು ಸಮೀಪದ ಪರ್ಲಿಯ ನಿವಾಸಿ, ಜುನೈದ್ ಎಂಬವರ ಪುತ್ರ ಸಲ್ಮಾನ್ ಫಾರಿಸ್ (15) ಎಂಬಾತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಸಲ್ಮಾನ್ ಫಾರಿಸ್ ಬಿ ಸಿ ರೋಡು ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಶುಕ್ರವಾರ ಕನಕದಾಸ ಜಯಂತಿ ಪ್ರಯುಕ್ತ ಶಾಲೆಗೆ ರಜೆ ಇದ್ದ ಕಾರಣ ಮೂರು ನಾಲ್ಕು ಮಂದಿ ಸ್ನೇಹಿತರ ತಂಡದೊಂದಿಗೆ ಬ್ರಹ್ಮರಕೂಟ್ಲು ಬಂಟರ ಭವನದ ಹಿಂಭಾಗದ ನೇತ್ರಾವತಿ ನದಿಗೆ ಈಜಾಟಕ್ಕೆಂದು ತೆರಳಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿದ ವಿದ್ಯಾರ್ಥಿ ಸಲ್ಮಾನ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಜೊತೆಗಿದ್ದ ವಿದ್ಯಾರ್ಥಿಗಳು ನೀಡಿದ ಮಾಹಿತಿಯಂತೆ ಕಾರ್ಯಪ್ರವೃತ್ತರಾದ ಸ್ಥಳೀಯರು ನದಿಯಲ್ಲಿ ಮುಳುಗಿದ್ದ ಸಲ್ಮಾನ್ ಮೃತದೇಹ ಮೇಲಕ್ಕೆತ್ತಿದ್ದಾರೆ.
ಮೃತ ಸಲ್ಮಾನ್ ಫಾರಿಸ್ ತಂದೆ ಜುನೈದ್ ಮೂಲತಃ ಪುತ್ತೂರು ನಿವಾಸಿಯಾಗಿದ್ದು, ತಾಯಿ ತುಂಬೆ ನಿವಾಸಿಯಾಗಿದ್ದಾರೆ. ಇವರ ಕುಟುಂಬ ಕೆಲ ವರ್ಷಗಳ ಹಿಂದೆ ಬಿ ಸಿ ರೋಡು-ಪರ್ಲಿಯಾದಲ್ಲಿ ಮನೆ ಕಟ್ಟಿ ವಾಸವಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment