ಬಂಟ್ವಾಳ, ಡಿಸೆಂಬರ್ 22, 2022 (ಕರಾವಳಿ ಟೈಮ್ಸ್) : ವಿದ್ಯಾರ್ಥಿಗಳು ಮೊಬೈಲ್ ಮೂಲಕ ಆಗುವ ವಂಚನೆಗಳ ಬಗ್ಗೆ ಜಾಗೃತರಾಗಿ ತಮ್ಮ ಪರಿಸರದ ಇತರರಿಗೂ ಸದಾ ಜಾಗೃತಿ ಉಂಟು ಮಾಡಿದಾಗ ಅಪರಾಧ ಕೃತ್ಯಗಳನ್ನು ಕನಿಷ್ಠ ಮಟ್ಟಕ್ಕೆ ತರಬಹುದು ಎಂದು ಮಂಗಳೂರು ಸೆನ್ ಪೊಲೀಸ್ ಠಾಣಾ ಉಪನಿರೀಕ್ಷಕ ನಿತ್ಯಾನಂದ ಗೌಡ ಹೇಳಿದರು.
ಗೂಡಿನಬಳಿಯ ಬಿ ಮೂಡ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸೈಬರ್ ಕ್ರೈಮ್ ಮತ್ತು ಸಂಚಾರ ನಿಯಮಗಳ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೋವಿಡ್ ಬಳಿಕ ವಿದ್ಯಾರ್ಥಿ ಸಮೂಹ ಮೊಬೈಲ್ ಹೆಚ್ಚಾಗಿ ಬಳಸುತ್ತಿದ್ದು, ಇಂತಹ ಸಂದರ್ಭಗಳಲ್ಲಿ ಸೈಬರ್ ಮತ್ತು ಆರ್ಥಿಕ ಅಪರಾಧಗಳ ಜಾಲಗಳಿಗೆ ಬಲಿಯಾಗುತ್ತಿರುವ ಪ್ರಕರಣಗಳು ದಾಖಲಾಗುತ್ತಿವೆ. ಇದರ ವಿರುದ್ದ ಸದಾ ಎಚ್ಚರದಿಂದಿದ್ದು ಸೈಬರ್ ಅಪರಾಧಮುಕ್ತ ಸಮಾಜ ನಿರ್ಮಾಣ ಮಾಡಲು ತಳಮಟ್ಟದಿಂದ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಸೆನ್ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಪಳನಿವೇಲು, ನಿರಂಜನ್, ದರ್ಶನ್, ಕಾಲೇಜು ಪ್ರಾಂಶುಪಾಲ ಯೂಸುಫ್ ವಿಟ್ಲ, ಉಪನ್ಯಾಸಕರಾದ ಅಬ್ದುಲ್ ರಝಾಕ್, ಬಾಲಕೃಷ್ಣ ನಾಯ್ಕ್, ದಾಮೋದರ್ ಮೊದಲಾದವರಿದ್ದರು.
0 comments:
Post a Comment