ಬಂಟ್ವಾಳ, ಡಿಸೆಂಬರ್ 21, 2022 (ಕರಾವಳಿ ಟೈಮ್ಸ್) : ಕಳೆದ ಅಕ್ಟೋಬರ್ 25 ರಂದು ಮೈಸೂರಿಗೆ ಕೆಲಸಕ್ಕೆಂದು ಮನೆಯಲ್ಲಿ ಹೇಳಿ ತೆರಳಿದ ತಾಲೂಕಿನ ಪುಣಚ ಗ್ರಾಮದ ಮೊಟ್ಟೆತ್ತಡ್ಕ-ಕೆದುಮೂಲೆ ನಿವಾಸಿ ಯುವಕ, ದಿವಂಗತ ವೀರಪ್ಪ ನಾಯ್ಕ ಅವರ ಪುತ್ರ ಕಮಲಾಕ್ಷ (32) ಎಂಬಾತನ ಅಸ್ಥಿಪಂಜರ ಬುಧವಾರ (ಡಿ 21) ಬಂಟ್ವಾಳ ತಾಲೂಕು ಪುಣಚ ಗ್ರಾಮದ ನೆಲ್ಲಿಗುಡ್ಡೆ ಎಂಬಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಮೃತ ಯುವಕನ ತಾಯಿ ರೇವತಿ ಅವರು ವಿಟ್ಲ ಪೊಲೀಸ್ ಠಾಣೆಗೆ ಫಿರ್ಯಾದಿ ಸಲ್ಲಿಸಿದ್ದು, ತನ್ನ ಮಗ ಕಮಲಾಕ್ಷ ಅಕ್ಟೋಬರ್ 25 ರಂದು ಮನೆಯಲ್ಲಿ ನಾನು ಮತ್ತು ಮಗಳು ಸುಮಿತ್ರ ಇರುವಾಗ ಬೆಳಿಗ್ಗೆ 10 ಗಂಟೆಗೆ ಮೈಸೂರಿಗೆ ಕೆಲಸಕ್ಕೆಂದು ಹೋಗುವುದಾಗಿ ಹೇಳಿ ಒಂದು ಜೊತೆ ಬಟ್ಟೆ ತೆಗೆದುಕೊಂಡು ಹೋಗಿರುತ್ತಾನೆ. ಬಳಿಕ ಆತ ಯಾವುದೇ ಫೆÇನ್ ಕರೆ ಮಾಡದ ಕಾರಣ ಮಗಳು ಸುಮಿತ್ರಳು ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆದರೆ ಆತ ಮನೆಗೆ ಬರಬಹುದೆಂದು ನಿರೀಕ್ಷಿಸಿ ಯಾವುದೇ ದೂರು ನೀಡದೇ ಸುಮ್ಮನೆ ಇದ್ದೆವು.
ಡಿಸೆಂಬರ್ 21 ರಂದು ಬುಧವಾರ ಬೆಳಿಗ್ಗೆ 9 ಗಂಟೆಗೆ ಬಂಟ್ವಾಳ ತಾಲೂಕು ಪುಣಚ ಗ್ರಾಮದ ನೆಲ್ಲಿಗುಡ್ಡೆ ಸರಕಾರಿ ಕಾಡಿನಲ್ಲಿ ಶವ ಇರುವ ವಿಷಯ ತಿಳಿದು ನಾನು ಹಾಗೂ ಮಗಳು ಮೃತದೇಹದ ಬಳಿ ತೆರಳಿ ಪರಿಶೀಲಿಸಿದ್ದು, ಕಮಲಾಕ್ಷ ಧರಿಸಿದ ಬಟ್ಟೆ, ಚಪ್ಪಲಿ, ಫೆÇೀನ್ ಇರುವುದು ಕಂಡು ಬಂದಿರುತ್ತದೆ. ಇದರ ಅಧಾರದಲ್ಲಿ ಕಮಲಾಕ್ಷನ ಮೃತದೇಹ ಎಂದು ಗುರುತಿಸಲಾಗಿದೆ.
ಕಮಲಾಕ್ಷ ಯಾವುದೋ ವಿಚಾರಕ್ಕೆ ಮನೆಯಿಂದ ಹೋದವನು ಜೀವನದಲ್ಲಿ ಜಿಗುಪ್ಸೆ ಹೊಂದಿ ಸಾಯುವ ಉದ್ದೇಶದಿಂದ ಯಾವುದೋ ಒಂದು ದಿನ ನೆಲ್ಲಿಗುಡ್ಡೆ ಕಾಡು ಪ್ರದೇಶದಲ್ಲಿ ಅಕೇಶಿಯಾ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಾಯಿ ರೇವತಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಸಂಖ್ಯೆ 50/2022 ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment