ದೋಹಾ, ಡಿಸೆಂಬರ್ 19, 2022 (ಕರಾವಳಿ ಟೈಮ್ಸ್) : ಕತಾರ್ ದೇಶದ ಲುಸೇಲ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಫಿಫಾ ವಿಶ್ವಕಪ್ ಫುಟ್‍ಬಾಲ್ ಫೈನಲ್ ಹಣಾಹಣಿಯಲ್ಲಿ ನಾಯಕ ಲಿಯೋನೆಲ್ ಮೆಸ್ಸಿ ಅವರ ಅದ್ಭುತ ಆಟದ ನೆರವಿನಿಂದ ಅರ್ಜೆಂಟೀನಾ ತಂಡ ಪೆನಾಲ್ಟಿ ಶೂಟೌಟ್ ಮೂಲಕ ಫ್ರಾನ್ಸ್ ತಂಡವನ್ನು ಬಗ್ಗುಬಡಿದು ಕಾಲ್ಚೆಂಡು ಆಟದ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಗ್ರೇಟ್ ಫಿನಾಲೆಯ ಪಂದ್ಯದಲ್ಲಿ ಅರ್ಜೆಂಟೀನಾ ನಾಯಕ ಮೆಸ್ಸಿ 2 ಗೋಲ್ ಹೊಡೆದು ತಂಡಕ್ಕೆ ಜಯ ತಂದು ಕೊಡುವ ಮೂಲಕ ತಮ್ಮ ಕನಸನ್ನು ನನಸು ಮಾಡಿದ್ದಾರೆ.
1978, 1986ರಲ್ಲಿ ಅರ್ಜೆಂಟೀನಾ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. 2014ರಲ್ಲಿ ಫೈನಲ್ ಪಂದ್ಯದಲ್ಲಿ ಜರ್ಮನಿ ವಿರುದ್ಧ ಅರ್ಜೆಂಟೀನಾ ಸೋತಿತ್ತು. ಬಳಿಕ ಇದೀಗ 36 ವರ್ಷದ ನಂತರ ಫುಟ್ಬಾಲ್ ವಿಶ್ವಕಪ್ ಇತಿಹಾಸದಲ್ಲಿ 3ನೇ ಬಾರಿಗೆ ಫುಟ್ಬಾಲ್ ಕೂಟದಲ್ಲಿ ವಿಶ್ವ ಚಾಂಪಿಯನ್ ಪೀಠವನ್ನು ಅಲಂಕರಿಸಿದೆ.
ಫ್ರಾನ್ಸ್ ವಿರುದ್ಧದ ಫೈನಲ್ ಪಂದ್ಯದ ಆರಂಭದಲ್ಲೇ ಅರ್ಜೆಂಟೀನಾ ಮುನ್ನಡೆ ಪಡೆದಿತ್ತು. 23ನೇ ನಿಮಿಷದಲ್ಲಿ ಮೆಸ್ಸಿ ಪೆನಾಲ್ಟಿ ಕಿಕ್ ಮೂಲಕ ಮೊದಲ ಗೋಲು ಹೊಡೆದರು. ಇದರ ಬೆನ್ನಲ್ಲೇ ಡಿ ಮಾರಿಯಾ 36ನೇ ನಿಮಿಷದಲ್ಲಿ ಗೋಲು ಹೊಡೆದರು. 80ನೇ ನಿಮಿಷದಲ್ಲಿ ಕಿಲಿಯನ್ ಎಂಬಾಪೆ ಪೆನಾಲ್ಟಿ ಮೂಲಕ ಫ್ರಾನ್ಸ್ ಪರ ಮೊದಲ ಗೋಲು ಬಾರಿಸಿದರು. ಎರಡೇ ನಿಮಿಷದಲ್ಲಿ ಮತ್ತೊಂದು ಗೋಲು ಹೊಡೆದು ಪಂದ್ಯಕ್ಕೆ ರೋಚಕ ತಿರುವು ನೀಡಿದರು.
ನಿಗದಿತ 90 ನಿಮಿಷದಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದ್ದರಿಂದ ಪಂದ್ಯ 30 ನಿಮಿಷಗಳ ಹೆಚ್ಚುವರಿ ಸಮಯಕ್ಕೆ ವಿಸ್ತರಣೆಗೊಂಡಿತು. ಈ ವೇಳೆ ಮೆಸ್ಸಿ 109ನೇ ನಿಮಿಷದಲ್ಲಿ ಗೋಲು ಹೊಡೆಯುವ ಮೂಲಕ ಫ್ರಾನ್ಸ್‍ಗೆ ಮುನ್ನಡೆ ತಂದುಕೊಟ್ಟರು. ಆದರೆ 118ನೇ £ಮಿಷದಲ್ಲಿ ಎಂಬಾಪೆ ಪೆನಾಲ್ಟಿ ಮೂಲಕ ಗೋಲು ಹೊಡೆದು ಮತ್ತೆ ತಿರುವು ನೀಡಿದರು. 120 ನಿಮಿಷಗಳ ಆಟದಲ್ಲಿ ಎರಡು ತಂಡಗಳು ತಲಾ 3 ಗೋಲ್ ಹೊಡೆದ ಕಾರಣ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.
ಪೆನಾಲ್ಟಿಯಲ್ಲಿ 4-2 ಗೋಲುಗಳಿಂದ ಫ್ರಾನ್ಸ್ ತಂಡವನ್ನು ಸೋಲಿಸುವ ಮೂಲಕ ಅರ್ಜೆಂಟೀನಾ ವಿಶ್ವ ಚಾಂಪಿಯನ್ ಆಗಿ ಮೂಡಿಬಂತು. ವಿಶೇಷ ಎಂದರೆ ಅರ್ಜೆಂಟೀನಾ ಮೊದಲ ಪಂದ್ಯಲ್ಲೇ ಸೌದಿ ಅರೇಬಿಯಾ ವಿರುದ್ಧ ಸೋತಿತ್ತು. ಆದರೆ ನಂತರದ ಪಂದ್ಯಗಳಲ್ಲಿ ಅತ್ಯುತ್ತಮ ಆಟದ ಮೂಲಕ ಫೈನಲ್ ಪ್ರವೇಶಿಸಿತ್ತು.
ಪ್ರಶಸ್ತಿ ವಿಜೇತ ಅರ್ಜೆಂಟೀನಾ ತಂಡ ಬರೋಬ್ಬರಿ 42 ಮಿಲಿಯನ್ ಡಾಲರ್ (ಅಂದಾಜು 347 ಕೋಟಿ ರೂಪಾಯಿ) ಮೊತ್ತವನ್ನು ಬಹುಮಾನವಾಗಿ ಪಡೆದರೆ, ರನ್ನರ್-ಅಪ್ ಪಟ್ಟಕ್ಕೆ ತೃಪ್ತಿಪಟ್ಟುಕೊಂಡ ಫ್ರಾನ್ಸ್ ತಂಡ 30 ಮಿಲಿಯನ್ ಡಾಲರ್ (ಅಂದಾಜು 248 ಕೋಟಿ ರೂಪಾಯಿ) ಮೊತ್ತವನ್ನು ಬಹುಮಾನವಾಗಿ ಪಡೆದುಕೊಂಡಿದೆ.
ಈ ವಿಶ್ವಕಪ್ ಗೆಲುವಿನೊಂದಿಗೆ ಮೆಸ್ಸಿ ತಮ್ಮ ಅಂತರಾಷ್ಟ್ರೀಯ ಫುಟ್ಬಾಲ್ ವೃತ್ತಿಜೀವನವನ್ನು ಅಂತ್ಯಗೊಳಿಸಿದ್ದಾರೆ. ಫೈನಲ್ ಪಂದ್ಯ ತನ್ನ ಅಂತರಾಷ್ಟ್ರೀಯ ವೃತ್ತಿ ಜೀವನದ ಕೊನೆಯ ಪಂದ್ಯವಾಗಲಿದೆ ಎಂದು ಮೆಸ್ಸಿ ಈಗಾಗಲೇ ಹೇಳಿಕೊಂಡಿದ್ದರು.
1978ರಲ್ಲಿ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಗೆದ್ದಿದ್ದ ಅರ್ಜೆಂಟೀನಾ, 1986ರಲ್ಲಿ ಡಿಯೇಗೊ ಮರಡೊನಾ ಸಾರಥ್ಯದಲ್ಲಿ ಎರಡನೇ ಬಾರಿ ವಿಶ್ವ ಕಪ್ ಗೆದ್ದಿತ್ತು. ಈಗ ಲಿಯೋನೆಲ್ ಮೆಸ್ಸಿ ಸಾರಥ್ಯದಲ್ಲಿ ಮತ್ತೊಮ್ಮೆ ಟ್ರೋಫಿ ಎತ್ತಿ ಹಿಡಿದು, ವಿಶ್ವಕಪ್ ಇತಿಹಾಸದಲ್ಲಿ ಮೂರನೇ ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ.
0 comments:
Post a Comment