ಬಂಟ್ವಾಳ, ಡಿಸೆಂಬರ್ 11, 2022 (ಕರಾವಳಿ ಟೈಮ್ಸ್) : ಪ್ರಗತಿಪರ ದಕ್ಷಿಣ ಕನ್ನಡ ಜಿಲ್ಲಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ (ರಿ) ಇದರ ಸಮಾವೇಶವು ಬಿ ಸಿ ರೋಡಿನ ಲಯನ್ಸ್ ಸೇವಾ ಭವನದಲ್ಲಿ ನಡೆಯಿತು.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ, ಕಟ್ಟಡ ಕಾರ್ಮಿಕರು ಸಂಘಟಿತರಾಗಿ ಸೌಲಭ್ಯಗಳನ್ನು ಪಡೆಯಲು ಹೋರಾಟ ನಡೆಸಬೇಕು, ಸರಕಾರವು ಕಲ್ಯಾಣ ಮಂಡಳಿಯ ಹಣವನ್ನು ಇತರ ಉದ್ದೇಶಕ್ಕೆ ಬಳಸುತ್ತಿದ್ದು ಇದರಿಂದ ಕಟ್ಟಡ ಕಾರ್ಮಿಕರಿಗೆ ವಂಚನೆಯಾಗುತ್ತಿದೆ. ರೈತರು ಕಾರ್ಮಿಕರು ಜೊತೆಯಾಗಿ ಸರಕಾರದ ನೀತಿಗಳ ವಿರುದ್ಧ ಐಕ್ಯ ಹೋರಾಟ ನಡೆಸಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಎಐಸಿಸಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ಪಿ ಅಪ್ಪಣ್ಣ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತರಾಗಿದ್ದು ಮಂಡಳಿಯಿಂದ ಸಿಗಬೇಕಾದ ಸೌಲಭ್ಯಗಳು ಸರಿಯಾಗಿ ಕಾರ್ಮಿಕರಿಗೆ ಸಿಗುತ್ತಿಲ್ಲ. ಕಿಟ್‍ಗಳನ್ನು ನೀಡುವ ಮೂಲಕ ಕಾರ್ಮಿಕರನ್ನು ಬಿಕ್ಷುಕರಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಮಂಡಳಿಯ ಹಣವನ್ನು ಇತರ ಉದ್ದೇಶಕ್ಕೆ ಸರಕಾರವು ಬಳಕೆ ಮಾಡುತ್ತಿದ್ದು, ಕಲ್ಯಾಣ ಮಂಡಳಿಯಲ್ಲಿ ಕೋಟ್ಯಂತರ ರೂಪಾಯಿ ಹಗರಣಗಳು ನಡೆಯುತ್ತಿದೆ ಎಂದು ಆರೋಪಿಸಿದರು. ಕಾರ್ಮಿಕರು ಈ ಬಗ್ಗೆ ತಿಳಿದುಕೊಂಡು ಬಲಿಷ್ಟವಾಗಿ ಸಂಘಟನೆಯನ್ನು ಕಟ್ಟಿ ಹೋರಾಟ ನಡೆಸಬೇಕೆಂದು ಕರೆಯಿತ್ತರು.
ಕಾರ್ಮಿಕರು ಕೇವಲ ಸೌಲಭ್ಯಕ್ಕಾಗಿ ಮಾತ್ರ ಹೋರಾಟ ನಡೆಸುವುದರ ಬದಲಾಗಿ ಒಂದು ಸ್ಪಷ್ಟವಾದ ರಾಜಕೀಯ ಕಣ್ಣೋಟವನ್ನು ಹೊಂದಬೇಕು. ಆ ಮೂಲಕ ರಾಜಕೀಯ ಪ್ರಜ್ಞೆ ಯನ್ನು ಬೆಳೆಸಿಕೊಳ್ಳುವ ಮುಖಾಂತರ ಸಮ ಸಮಾಜವನ್ನು ಕಟ್ಟಲು ಮುಂದಾಗಬೇಕೆಂದರು.
ಕಾರ್ಮಿಕ ಮುಖಂಡ ರಾಬರ್ಟ್ ಡಿ’ಸೋಜ ಸುಳ್ಯ ಮಾತನಾಡಿ ಕಟ್ಟಡ ಕಾರ್ಮಿಕರು ತಮಗೆ ಆಗುತ್ತಿರುವ ಅನ್ಯಾಯದ ವಿರುದ್ದ ಸ್ಪಷ್ಟವಾದ ಹೋರಾಟ ನಡೆಸಬೇಕು. ಹೋರಾಟಗಳು ಕೇವಲ ಬೇಡಿಕೆ ಈಡೇರಿಕೆಗೆ ಮಾತ್ರ ಸೀಮಿತವಾಗಬಾರದು ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಯುವ ಘಟಕದ ಜಿಲ್ಲಾದ್ಯಕ್ಷ ಆದಿತ್ಯ ನಾರಾಯಣ ಕೊಲ್ಲಾಜೆ ಮಾತನಾಡಿ ಕಟ್ಟಡ ಕಾರ್ಮಿಕರು ಇಂದು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದು ಸಂತೋಷದಾಯಕವಾಗಿದ್ದು ಸರಕಾರದ ನೀತಿಗಳು ರೈತ, ಕಾರ್ಮಿಕರ ವಿರೋಧಿಯಾಗಿದೆ ಎಂದರು. ಮುಖ್ಯವಾಗಿ ಸರಕಾರವು ಸರಕಾರಿ ಆಸ್ಪತ್ರೆಗಳ ಖಾಸಗೀಕರಣಕ್ಕೆ ಮುಂದಾಗಿದ್ದು ಇದರಿಂದ ದೊಡ್ಡ ಮಟ್ಟದಲ್ಲಿ ಕಾರ್ಮಿಕರು ಅನ್ಯಾಯಕ್ಕೆ ಒಳಗಾಗುತ್ತಾರೆ. ಸರಕಾರಿ ಆಸ್ಪತ್ರೆಗಳ ಉಳಿಸುವ ನಿಟ್ಟಿನಲ್ಲಿ ಹೋರಾಟಕ್ಕೆ ಕೈ ಜೋಡಿಸಬೇಕೆಂದರು.
ಸಾಮಾಜಿಕ ಕಾರ್ಯಕರ್ತ ರಾಜಾ ಚೆಂಡ್ತಿಮಾರ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಕಾರ್ಮಿಕ ಮುಖಂಡ ಅಚ್ಯುತ ಕಟ್ಟೆ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
ಸಮಾವೇಶದಲ್ಲಿ ಯುವ ರೈತ ಮುಖಂಡ ಸುರೇಂದ್ರ ಕೋರ್ಯ, ಕರ್ನಾಟಕ ರಾಜ್ಯ ಪ್ರಗತಿಪರ ಕಟ್ಟಡ ಕಾರ್ಮಿಕರ ಸಂಘ, ಎಐಸಿಸಿಟಿಯು ರಾಜ್ಯ ಮುಖಂಡ ಚೆನ್ನಯ್ಯ, ಎಐಸಿಸಿಟಿಯು ಜಿಲ್ಲಾ ಮುಖಂಡ ಪಿ ಜಿ ಮೋಹನ್, ಕಾರ್ಮಿಕ ಮುಖಂಡರು ಹಾಗೂ ಹಿರಿಯ ವಕೀಲ ಶಿವಕುಮಾರ್ ಎಸ್ ಎಂ ಬೆಳ್ತಂಗಡಿ, ಕಾರ್ಮಿಕ ಮುಖಂಡ ಸುರೇಂದ್ರ ಕೋಟ್ಯಾನ್, ಪಿಂಚಣಿದಾರರ ಸಂಘದ ಮುಖಂಡರಾದ ಸರಸ್ವತಿ ಕಡೇಶಿವಾಲ್ಯ, ಅಕ್ಷರ ದಾಸೋಹ ನೌಕರರ ಸಂಘದ ಮುಖಂಡರಾದ ಜಯಶ್ರೀ ಆರ್ ಕೆ, ಕಾರ್ಮಿಕ ಮುಖಂಡರಾದ ದಿನೇಶ್ ಆಚಾರಿ ಮೊದಲಾದವರು ಭಾಗವಹಿಸಿದ್ದರು.
ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ ಸ್ವಾಗತಿಸಿ, ಪ್ರಸ್ತಾವನೆಗೈದರು. ಇದೇ ವೇಳೆ ಜಿಲ್ಲಾ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಘ (ನಿ), ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಇದರ ಸಹೋಗದಲ್ಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
0 comments:
Post a Comment