ಬೆಂಗಳೂರು, ಡಿಸೆಂಬರ್ 13, 2022 (ಕರಾವಳಿ ಟೈಮ್ಸ್) : ಮಕ್ಕಳ ಶೈಕ್ಷಣಿಕ ಗುಣಮಟ್ಟ ಅಳೆಯಲು ನಿರ್ಧರಿಸಿರುವ ರಾಜ್ಯ ಶಿಕ್ಷಣ ಇಲಾಖೆ 5 ಹಾಗೂ 8ನೇ ತರಗತಿಗಳಿಗೂ ವಿಶೇಷ ವಾರ್ಷಿಕ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.
ಮೌಲ್ಯಾಂಕನ ಪರೀಕ್ಷೆ ಹೆಸರಿನಲ್ಲಿ ಈ ಪರೀಕ್ಷೆ ನಡೆಯಲಿದೆ. ಮಕ್ಕಳ ಕಲಿಕಾ ಕೊರತೆ ನೀಗಿಸಲು ಕಲಿಕೆಯಲ್ಲಿ ಚೇತರಿಕೆ ಮೂಡಿಸಲು ಇಲಾಖೆ ಈ ನಿರ್ಧಾರ ಮಾಡಿದೆ. ಕ್ಲಸ್ಟರ್ ಹಂತದಲ್ಲಿ ಪರೀಕ್ಷಾ ವ್ಯವಸ್ಥೆಗಳು ನಡೆಯಲಿದೆ.
ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಪರೀಕ್ಷೆಯ ಸಂಪೂರ್ಣ ಜವಾಬ್ದಾರಿ ವಹಿಸಲಿದೆ. ರಾಜ್ಯ ಪಠ್ಯ ಕ್ರಮದ ವಿದ್ಯಾರ್ಥಿಗಳ ಕಲಿಕಾ ಸಾಧನೆ ಯಾವ ರೀತಿ ಇದೆ ಎಂಬುದನ್ನು ಅಳೆಯಲು ಈ ವಾರ್ಷಿಕ ಪರೀಕ್ಷೆ ಮಾಡಲಾಗ್ತಿದೆ. ಯಾವುದೇ ವಿದ್ಯಾರ್ಥಿಗಳನ್ನ ಈ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸುವುದಿಲ್ಲ. ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುವ ವ್ಯವಸ್ಥೆ ಇಲಾಖೆ ಮಾಡಲಿದೆ. ಮಕ್ಕಳ ಕಲಿಕೆ ಗುಣಮಟ್ಟ ಏನು? ಕೊರತೆಗಳೇನು? ಯಾವ ವಿಷಯಗಳಲ್ಲಿ ಹಿನ್ನಡೆಯಾಗಿದೆ ಎಂಬುದನ್ನು ತಿಳಿಯಲು ಈ ಪರೀಕ್ಷೆಯಿಂದ ಸಹಕಾರಿಯಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ರೂಪಣಾತ್ಮಕ ಪರೀಕ್ಷೆ ಮತ್ತು ಸಂಕಲನಾತ್ಮಕ ಪರೀಕ್ಷೆ ವಿಧಾನದಲ್ಲಿ ಪರೀಕ್ಷೆ ನಡೆಯಲಿದೆ. ಕ್ಲಸ್ಟರ್ ಹಂತದಲ್ಲಿ ಈ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪರೀಕ್ಷಾ ಪ್ರಕ್ರಿಯೆಗೆ ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕ ಪಡೆಯುವಂತಿಲ್ಲ. 8ನೇ ತರಗತಿಗೆ ಒಂದು ಪರೀಕ್ಷಾ ಕೇಂದ್ರಕ್ಕೆ 50 ಮಕ್ಕಳು ಇರುವಂತೆ, 5ನೇ ತರಗತಿಗೆ 25 ಮಕ್ಕಳು ಒಂದು ಕೇಂದ್ರಕ್ಕೆ ಇರುವಂತೆ ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡಬೇಕು. ಮಕ್ಕಳ ಸಂಖ್ಯೆ ಕಡಿಮೆಯಿದ್ದರೆ 2 ಕಿಮೀ ವ್ಯಾಪ್ತಿಯ ಶಾಲೆಗಳನ್ನು ಒಳಪಡಿಸಿಕೊಳ್ಳುವುದು. ಪರೀಕ್ಷಾ ಕೇಂದ್ರ ಸ್ಥಾಪನೆಗೆ ಡಯಟ್ ಪ್ರಾಂಶುಪಾಲರು, ಬಿಇಓಗಳು ಚರ್ಚಿಸಿ ನಿರ್ಧಾರ ಮಾಡಬೇಕು. ಕ್ಲಸ್ಟರ್ ವ್ಯಾಪ್ತಿಯಲ್ಲಿ ಶಿಕ್ಷಕರನ್ನು ಅದಲು ಬದಲು ಮಾಡಬೇಕು. ಶಾಲಾ ಹಂತದಲ್ಲಿ ಪರೀಕ್ಷೆ ಪ್ರವೇಶ ಪತ್ರಗಳನ್ನ ಮುಖ್ಯಶಿಕ್ಷಕರು ವಿತರಿಸಬೇಕು.
50 ಅಂಕಗಳ ಪರೀಕ್ಷೆ ಇದಾಗಿದ್ದು, 2 ಗಂಟೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. 50 ಅಂಕದಲ್ಲಿ 40 ಅಂಕ ಲಿಖಿತ ಪರೀಕ್ಷೆ, 10 ಅಂಕ ಮೌಖಿಕ ಪರೀಕ್ಷೆ ನಡೆಸುವುದು. ಪ್ರಶ್ನೆ ಪತ್ರಿಕೆ ಮುದ್ರಣವನ್ನು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುದ್ರಿಸುತ್ತದೆ. ಜಿಲ್ಲಾ ಡಯಟ್‍ಗಳಿಗೆ ಇದು ಹಂಚಿಕೆಯಾಗಲಿದೆ. ಇದರ ಉಸ್ತುವಾರಿ ಬಿಇಓ ಆಗಿರುತ್ತಾರೆ. ಸಂಕಲನಾತ್ಮಕ ಮತ್ತು ರೂಪಣಾತ್ಮಕ ಸೇರಿ 100 ಅಂಕಗಳಿಗೆ ಪರೀಕ್ಷೆ ಇರಲಿದೆ. 35 ಅಂಕ ಪಡೆದ ವಿದ್ಯಾರ್ಥಿ ಪ್ರಗತಿ ಸಾಧಿಸಿರುವ ವಿದ್ಯಾರ್ಥಿ ಅಂತ ಘೋಷಣೆ ಮಾಡಲಾಗುತ್ತದೆ. ಕಡಿಮೆ ಅಂಕ ಪಡೆದ ವಿದ್ಯಾರ್ಥಿ ಫೇಲ್ ಮಾಡದೇ ಪ್ರಗತಿ ಸಾಧಿಸಬೇಕಾದ ವಿದ್ಯಾರ್ಥಿ ಅಂತ ಪರಿಗಣಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
0 comments:
Post a Comment