ಉಪ್ಪಿನಂಗಡಿ, ಜನವರಿ 15, 2023 (ಕರಾವಳಿ ಟೈಮ್ಸ್) : ಕಡಬ ತಾಲೂಕು ಗೋಳಿತ್ತೊಟ್ಟು ಗ್ರಾಮದ ಗೋಳಿತ್ತೊಟ್ಟು ಕಲಾಯಿಲ್ ನಿವಾಸಿ ಜಿಜನ್ ಅಬ್ರಹಾಂ ಅಲಿಯಾಸ್ ಜಿಜಿಕೆಎ ಅವರ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನಗದು ದೋಚಿದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಶನಿವಾರ (ಜ 14) ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಜಿಜನ್ ಅಬ್ರಹಾಂ ಅಲಿಯಾಸ್ ಜಿಜಿಕೆಎ ಅವರು ಫಿರ್ಯಾದಿ ಸಲ್ಲಿಸಿದ್ದು, ನಾನು ಸಂಸಾರದೊಂದಿಗೆ ಮಾವ ಸ್ಕರಿಯಾ ಅವರ ಜೊತೆ ವಾಸವಿದ್ದು, ಜ 12 ರಂದು ಮಾವನವರಿಗೆ ಅಸೌಖ್ಯದ ನಿಮಿತ್ತ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಜನ 13 ರಂದು ಸಂಜೆ 6 ಗಂಟೆಗೆ ಮಾವನವರ ಆರೈಕೆಯ ಬಗ್ಗೆ ಮನೆಗೆ ಬೀಗ ಹಾಕಿ ಹೆಂಡತಿ ಮಕ್ಕಳನ್ನು ಕೊಣಾಲು ಗ್ರಾಮದ ಆರ್ಲ ಮನೆಯಲ್ಲಿ ಬಿಟ್ಟು ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯಕ್ಕೆ ಹೋಗಿ ಜನವರಿ 14 ರಂದು ಬೆಳಿಗ್ಗೆ ಧರ್ಮಸ್ಥಳದಿಂದ ಬಂದು ಗೋಳಿತೊಟ್ಟುವಿನಲ್ಲಿರುವ ಮನೆಗೆ ಬೆಳಿಗ್ಗೆ 10.30 ಗಂಟೆಗೆ ಹೋದಾಗ ಮನೆಯ ಮುಂಬಾಗಿಲು ಅರೆ ತೆರೆದಿರುವುದು ಕಂಡು ಬಂತು. ಮನೆಯ ಒಳ ಹೋಗಿ ನೋಡಲಾಗಿ ಮನೆಯೊಳಗಿದ್ದ ಕಬ್ಬಿಣದ ಎಲ್ಲಾ ಕಪಾಟುಗಳ ಬಾಗಿಲುಗಳು ತೆರೆದು ಅದರೊಳಗಿದ್ದ ಬಟ್ಟೆಬರೆಗಳನ್ನು ಹಾಗೂ ಸೊತ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಎಳೆದು ಹಾಕಿರುವುದು ಕಂಡು ಬಂದಿರುತ್ತದೆ. ಮನೆಯ ಹಿಂಬದಿಯ ಅಡುಗೆ ಕೋಣೆಯ ಬಾಗಿಲು ಕೂಡಾ ತೆರೆದಿರುವುದು ಕಂಡು ಬಂದಿದೆ. ತಕ್ಷಣ ಈ ಬಗ್ಗೆ ಹೆಂಡತಿಗೆ ತಿಳಿಸಿ ಅವರನ್ನು ಸ್ಥಳಕ್ಕೆ ಕರೆದು ಅವಳು ಬಂದ ಬಳಿಕ ಪರಿಶೀಲಿಸಲಾಗಿ ಮಲಗುವ ಕೋಣೆಯ ಕಪಾಟಿನಲ್ಲಿ ಚಿನ್ನಾಭರಣಗಳನ್ನು ಇರಿಸಿ ಇಟ್ಟಿದ್ದ ಪೆಟ್ಟಿಗೆ ಕಳವಾಗಿರುವುದು ಕಂಡು ಬಂದಿದೆ. ಹಾಗೂ ಮನೆಯೊಳಗಿದ್ದ ಮೌಲ್ಯವರ್ಧಿತ ಬ್ಯಾಂಕಿಗೆ ಮತ್ತು ಜಮೀನಿಗೆ ಸಂಬಂಧಿಸಿದ ಕೆಲವೊಂದು ದಾಖಲೆ ಪತ್ರಗಳು ಕಂಡು ಬಂದಿರುವುದಿಲ್ಲ.
ಅಲ್ಲದೆ ಅತ್ತೆಯವರಿಗೆ ಸಂಬಂಧಿಸಿದ ಸುಮಾರು 1 ಲಕ್ಷ ರೂಪಾಯಿ ಮೌಲ್ಯದ 40 ಗ್ರಾಂ ತೂಕದ ಚಿನ್ನದ ಸರ, ಅತ್ತೆಯವರಿಗೆ ಸಂಬಂಧಿಸಿದ ಸುಮಾರು 50 ಸಾವಿರ ರೂಪಾಯಿ ಮೌಲ್ಯದ 20 ಗ್ರಾಂ ತೂಕದ ಚಿನ್ನದ ಸರ, ಅತ್ತೆಯವರಿಗೆ ಸಂಬಂಧಿಸಿದ ಸುಮಾರು 40 ಸಾವಿರ ರೂಪಾಯಿ ಮೌಲ್ಯದ ತಲಾ 8 ಗ್ರಾಂ ತೂಕದ 2 ಚಿನ್ನದ ಬಳೆಗಳು, ಅತ್ತೆಯವರಿಗೆ ಸಂಬಂಧಿಸಿದ ಸುಮಾರು 40 ಸಾವಿರ ರೂಪಾಯಿ ಮೌಲ್ಯದ 16 ಗ್ರಾಂ ತೂಕದ ಚಿನ್ನದ ಬಳೆ, ಅತ್ತೆಯವರಿಗೆ ಸಂಬಂಧಿಸಿದ ಸುಮಾರು 60 ಸಾವಿರ ರೂಪಾಯಿ ಮೌಲ್ಯದ ವಿವಿಧ ತೂಕದ ಒಟ್ಟು 24 ಗ್ರಾಂ ಚಿನ್ನದ 5 ಜೊತೆ ಬೆಂಡೋಲೆಗಳು, ಹೆಂಡತಿ ಸೌಮ್ಯಳಿಗೆ ಸಂಬಂಧಿಸಿದ ಸುಮಾರು 25 ಸಾವಿರ ರೂಪಾಯಿ ಮೌಲ್ಯದ 10 ಗ್ರಾಂ ತೂಕದ ನೆಕ್ಲೇಸ್, ಹೆಂಡತಿ ಸೌಮ್ಯಳಿಗೆ ಸಂಬಂಧಿಸಿದ ಸುಮಾರು 40 ಸಾವಿರ ರೂಪಾಯಿ ಮೌಲ್ಯದ ವಿವಿಧ ತೂಕದ 16 ಗ್ರಾಂ ಚಿನ್ನದ 5 ಜೊತೆ ಬೆಂಡೋಲೆಗಳು, ಹೆಂಡತಿ ಸೌಮ್ಯಳಿಗೆ ಸಂಬಂಧಿಸಿದ ಸುಮಾರು 20 ಸಾವಿರ ರೂಪಾಯಿ ಮೌಲ್ಯದ ತಲಾ 4 ಗ್ರಾಂ ತೂಕದ 2 ಉಂಗುರಗಳು, ಇಬ್ಬರು ಮಕ್ಕಳಿಗೆ ಸಂಬಂಧಿಸಿದ ಸುಮಾರು 60 ಸಾವಿರ ರೂಪಾಯಿ ಮೌಲ್ಯದ ತಲಾ 12 ಗ್ರಾಂ ತೂಕದ 2 ಚಿನ್ನದ ಸರಗಳು, ಇಬ್ಬರು ಮಕ್ಕಳಿಗೆ ಸಂಬಂಧಿಸಿದ ಸುಮಾರು 30 ಸಾವಿರ ರೂಪಾಯಿ ಮೌಲ್ಯದ ತಲಾ 6 ಗ್ರಾಂ ತೂಕದ ಚಿನ್ನದ 2 ಬ್ರಾಸ್ ಲೈಟ್ ಗಳು ಸಹಿತ 4.65 ಲಕ್ಷ ರೂಪಾಯಿ ಮೌಲ್ಯದ ಒಟ್ಟು 186 ಗ್ರಾಂ ಚಿನ್ನಾಭರಣಗಳು ಹಾಗೂ ಮನೆಯ ಹಾಲ್ ನಲ್ಲಿದ್ದ ಸುಮಾರು 60 ಸಾವಿರ ರೂಪಾಯಿ ಮೌಲ್ಯದ ಪ್ಯಾನಾಸೋನಿಕ್ ಕಂಪೆನಿಯ 52 ಇಂಚು ಟಿವಿ ಮತ್ತು ರಿಮೋಟ್, ಮಗ ಬಳಸುತ್ತಿದ್ದ ಸುಮಾರು 7 ಸಾವಿರ ರೂಪಾಯಿ ಮೌಲ್ಯದ ಬೋಟ್ ಕಂಪೆನಿಯ ಹೆಡ್ ಸೆಟ್, ಅಡುಗೆ ಕೋಣೆಯಲ್ಲಿ ಮನೆ ಬಳಕೆಗೆ ಉಪಯೋಗಿಸುತ್ತಿದ್ದ ಸುಮಾರು 5 ಸಾವಿರ ರೂಪಾಯಿ ಮೌಲ್ಯದ ಎಚ್ ಪಿ ಗ್ಯಾಸ್ ಸಿಲಿಂಡರ್ ಮತ್ತು ಸೂರ್ಯ ಕಂಪೆನಿಯ 3 ಬರ್ನಲ್ ಇರುವ ಗ್ಯಾಸ್ ಸ್ಟವ್, ಮಾವನವರು ಮಲಗುವ ಕೋಣೆಯ ಕಪಾಟಿನಲ್ಲಿರಿಸಿದ್ದ 50 ಸಾವಿರ ರೂಪಾಯಿ ನಗದು ಹಣವನ್ನು ಕಳ್ಳರು ಕದ್ದೊಯ್ದಿದ್ದಾರೆ. ಕಳವಾಗಿರುವ ಒಟ್ಟು ಸೊತ್ತುಗಳ ಮೌಲ್ಯ 5.87 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಜನವರಿ 13 ರ ಸಂಜೆ 6 ಗಂಟೆಯಿಂದ ಜ 14 ರ ಬೆಳಿಗ್ಗೆ 10:30 ರ ಮಧ್ಯಭಾಗದಲ್ಲಿ ಯಾರೋ ಕಳ್ಳರು ಮನೆಯ ಎದುರಿನ ಬಾಗಿಲಿನ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಒಳಪ್ರವೇಶಿಸಿ ಈ ಕಳವು ಕೃತ್ಯ ನಡೆಸಿದ್ದಾರೆ ಎಂದವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 04/2023 ಕಲಂ 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment