ಬಂಟ್ವಾಳ, ಮಾರ್ಚ್ 15, 2023 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮದ ಆಲಾಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸಜಿಪಮುನ್ನೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ಸ್ಥಳೀಯ ಗ್ರಾಮಗಳಿಗೆ ನೀರು ನೀಡದೆ ಕೇವಲ ಉಳ್ಳಾಲ ನಗರ ಸಭಾ ವ್ಯಾಪ್ತಿಗೆ ಮಾತ್ರ ನೀರು ಒದಗಿಸುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪಂಚ ಗ್ರಾಮಗಳ ಗ್ರಾಮಸ್ಥರು ನಾಗರಿಕ ಸಮಿತಿಯಡಿ ಒಗ್ಗೂಡಿ ಮಂಗಳವಾರ ಯೋಜನೆಯ ಘಟಕದ ಬಳಿ ಪ್ರತಿಭಟನೆ ನಡೆಸಿದರು.
ಜೀವ ಕೊಡಲೂ ಸಿದ್ದ, ನೀರು ಕೊಡಲೂ ಬದ್ದ ಎಂಬ ಘೋಷ ವಾಕ್ಯದೊಂದಿಗೆ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಉಳ್ಳಾಲ ನಗರಕ್ಕೆ ಬಿಡಿ ಎಲ್ಲಿಗೆ ಬೇಕಾದರೂ ನಾವು ನೀರು ಕೊಡಲು ರೆಡಿ ಇದ್ದೇವೆ. ಆದರೆ ಸ್ಥಳೀಯ ಗ್ರಾಮಗಳಿಗೆ ನೀರಿನ ವ್ಯವಸ್ಥೆ ಮಾಡದೆ ಇತರೆಡೆಗೆ ನೀರು ಕೊಡಲು ಬಿಡುವುದೇ ಇಲ್ಲ. ಜೀವ ಕೊಟ್ಟಾದರೂ ನಮ್ಮ ನೀರಿನ ಹಕ್ಕನ್ನು ಪಡೆದುಕೊಳ್ಳಲು ನಾವು ತಯಾರಾಗಿದ್ದೇವೆ. ಗ್ರಾಮಸ್ಥರ ಬೇಡಿಕೆಗೆ ಸರಕಾರ ಸೂಕ್ತ ಸಮಯದಲ್ಲಿ ಮನ್ನಣೆ ನೀಡದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ರೀತಿಯ ಹೋರಾಟಗಳನ್ನು ಸಂಘಟಿಸುವುದಾಗಿ ಪ್ರತಿಭಟನಾ ನಿರತ ಗ್ರಾಮಸ್ಥರು ಎಚ್ಚರಿಸಿದರು.
ನಾಗರಿಕ ಸಮಿತಿ ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಯೂಸುಫ್ ಕರಂದಾಡಿ, ಮುಹಮ್ಮದ್ ಶರೀಫ್ ನಂದಾವರ, ನಸೀಮಾ ಬೇಗಂ, ಫೌಝಿಯಾ, ಶಮೀರ್ ನಂದಾವರ, ಇಮ್ರಾನ್ ಹೈವೇ, ದೇವಿಪ್ರಸಾದ್ ಪೂಂಜಾ, ಅಮಾನ್ ನಂದಾವರ, ಬಿ ಎಂ ಅಬ್ಬಾಸ್ ಅಲಿ, ಶರೀಫ್ ಆಲಾಡಿ, ವಿಶ್ವನಾಥ ಬೆಳ್ಚಡ, ಶೋಭಾ, ಹರಿಣಾಕ್ಷಿ, ಎನ್ ಅಬ್ದುಲ್ ಕರೀಂ ಬೊಳ್ಳಾಯಿ, ಶಾಫಿ ನಂದಾವರ, ಆರಿಫ್ ನಂದಾವರ, ಬಶೀರ್ ನಂದಾವರ, ಹಂಝ ದಾಸರಗುಡ್ಡೆ, ಪರಮೇಶ್ವರ, ಇಸ್ಮಾಯಿಲ್ ಕೋಟೆ, ಸಿದ್ದೀಕ್ ಅರಫಾ, ಅಬ್ಬಾಸ್ ನಂದಾವರ, ಜಮಾಲ್ ರೋಯಲ್, ಇಮ್ರಾನ್ ದಿಲ್ ಫ್ರೆಂಡ್ಸ್, ಇಬ್ರಾಹಿಂ ಮಲಾಯಿಬೆಟ್ಟು, ಆಸಿಫ್ ಕೋಡಿ, ರಝಾಕ್, ಶಾಫಿ ಮುನ್ನೂರು ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment