ಮಧ್ಯರಾತ್ರಿಯೂ ಕ್ಷೇತ್ರದ ಜನರ ಕೈಗೆ ಸಿಗುವ ಅಪರೂಪದ ರಾಜಕಾರಣಿ ರಮಾನಾಥ ರೈ ಅವರನ್ನು ಗೆಲ್ಲಿಸುವುದು ಜನರ ಬಾಧ್ಯತೆಯಾಗಿದೆ : ಅಶ್ವನಿ ಕುಮಾರ್ ರೈ ಮನವಿ - Karavali Times ಮಧ್ಯರಾತ್ರಿಯೂ ಕ್ಷೇತ್ರದ ಜನರ ಕೈಗೆ ಸಿಗುವ ಅಪರೂಪದ ರಾಜಕಾರಣಿ ರಮಾನಾಥ ರೈ ಅವರನ್ನು ಗೆಲ್ಲಿಸುವುದು ಜನರ ಬಾಧ್ಯತೆಯಾಗಿದೆ : ಅಶ್ವನಿ ಕುಮಾರ್ ರೈ ಮನವಿ - Karavali Times

728x90

24 April 2023

ಮಧ್ಯರಾತ್ರಿಯೂ ಕ್ಷೇತ್ರದ ಜನರ ಕೈಗೆ ಸಿಗುವ ಅಪರೂಪದ ರಾಜಕಾರಣಿ ರಮಾನಾಥ ರೈ ಅವರನ್ನು ಗೆಲ್ಲಿಸುವುದು ಜನರ ಬಾಧ್ಯತೆಯಾಗಿದೆ : ಅಶ್ವನಿ ಕುಮಾರ್ ರೈ ಮನವಿ

ಬಂಟ್ವಾಳ, ಎಪ್ರಿಲ್ 24, 2023 (ಕರಾವಳಿ ಟೈಮ್ಸ್) : 1985 ರಿಂದ ನಿರಂತರವಾಗಿ ಬಂಟ್ವಾಳದಲ್ಲಿ ಚುನಾವಣಾ ರಾಜಕೀಯ ನಡೆಸುತ್ತಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿ ನಡೆಸುವುದರ ಜೊತೆಗೆ ಜನರ ಕಷ್ಟ-ಕಾರ್ಪಣ್ಯಗಳಿಗೆ ಸದಾ ಸ್ಪಂದಿಸುತ್ತಾ ಬಂದಿರುವ ಸರಳ-ಸಜ್ಜನ, ಜನಪರ ಚಿಂತನೆಯ ರಾಜಕಾರಣಿ ಬಿ ರಮಾನಾಥ ರೈ ಅವರನ್ನು ಗೆಲ್ಲಿಸುವುದು ಅವರಿಗಾಗಿ ಅಲ್ಲ. ಕ್ಷೇತ್ರದ ಜನರಿಗಾಗಿ ಅತ್ಯಂತ ಅನಿವಾರ್ಯವಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ನೋಟರಿ-ನ್ಯಾಯವಾದಿ ಎಂ ಅಶ್ವನಿ ಕುಮಾರ್ ಹೇಳಿದರು. 

ಸೋಮವಾರ ಮಧ್ಯಾಹ್ನ ಬಿ ಸಿ ರೋಡಿನ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಪ್ಪ ಮೊಯಿಲಿ, ಎಸ್ ಎಂ ಕೃಷ್ಣ ಹಾಗೂ ಸಿದ್ದರಾಮಯ್ಯ ಅವರಂತಹ ಘಟಾನುಘಟಿ ಮುಖ್ಯಮಂತ್ರಿಗಳ ಸಚಿವ ಸಂಪುಟದಲ್ಲಿ ಮೂರು ಬಾರಿ ಮಂತ್ರಿಗಳಾಗಿ ಕೆಲಸ ಮಾಡಿದರೂ ರಮಾನಾಥ ರೈ ಅವರು ಬೆಂಗಳೂರಿನಲ್ಲಿ ಮನೆ-ಬಂಗಲೆ ಮಾಡಿ ಬೀಡುಬಿಟ್ಟಿಲ್ಲ. ಐಶಾರಾಮಿ ಜೀವನ ನಡೆಸಿಲ್ಲ, ಸದಾ ಕ್ಷೇತ್ರದ ಜನರ ಚಿಂತನೆಯಲ್ಲೇ ದಿನ ಕಳೆದು ಸ್ವಕ್ಷೇತ್ರದಲ್ಲೇ ಉಳಿದುಕೊಂಡು ಜನಸೇವೆ ಮಾಡಿದ್ದಾರೆ ಎಂದರು. 

ಕ್ಷೇತ್ರದ ಜನರ ಬೇಕು-ಬೇಡಗಳಿಗೆ ಸ್ಪಂದಿಸುವುದರ ಜೊತೆಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶಕ್ತಿ ಮೀತಿ ಕ್ರಮ ಕೈಗೊಂಡಿದ್ದಾರೆ. ಮಧ್ಯರಾತ್ರಿಯಲ್ಲೂ ಕ್ಷೇತ್ರದ ಜನರ ಕೈಗೆ ಸಿಗುವ, ಕ್ಷೇತ್ರದ ಜನರ ಕಾರ್ಯಕ್ರಮಗಳಿಗೆ ತಪ್ಪದೆ ಹಾಜರಾಗಿ ಸುಖ-ದುಃಖ ವಿಚಾರಿಸುವ ಏಕೈಕ ಹಾಗೂ ಅಪರೂಪದ ನಾಯಕರಾಗಿ ರಮಾನಾಥ ರೈ ಎಂದ ಅಶ್ವನಿ ಕುಮಾರ್ ಬಂಟ್ವಾಳ ಕ್ಷೇತ್ರ ವ್ಯಾಪ್ತಿಯ ಕುಗ್ರಾಮವನ್ನು ಕೂಡಾ ಸಕಲ ಸೌಲಭ್ಯಗಳುಳ್ಳ ಮುಂದುವರಿದ ಗ್ರಾಮವನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲಲೇಬೇಕು. ಇದೇನೂ ಅವರನ್ನು ಮೆಚ್ಚಿಸುವ ಉದ್ದೇಶದಿಂದ ಹೇಳುವ ಮಾತಲ್ಲ. ಬಂಟ್ವಾಳ ಕ್ಷೇತ್ರ ಸಂಚರಿಸಿದರೆ ಇದೆಲ್ಲವೂ ಸಾಮಾನ್ಯ ಜನರಿಗೂ ಮನದಟ್ಟಾಗುವ ಹಗಲು ಸತ್ಯ ಎಂದರು. 

ರಮಾನಾಥ ರೈ ಅವರನ್ನು ಯಾರಾದರೂ ದ್ವೇಷಿಸುವುದಾದರೆ, ದೂರುವುದಾದರೆ ಅದರಲ್ಲಿ ಏನಾದರೂ ವೈಯುಕ್ತಿಕ ವಿಚಾರ ಇರುತ್ತದೆಯೇ ಹೊರತು ರಾಜಕೀಯವಾಗಿ ಹಾಗೂ ಅಭಿವೃದ್ದಿ ವಿಚಾರದಲ್ಲಿ ಅವರನ್ನು ಯಾವತ್ತೂ ದ್ವೇಷಿಸಲೋ, ದೂರಲೋ ಖಂಡಿತ ಸಾಧ್ಯವಿಲ್ಲ ಎಂದ ಅಶ್ವನಿ ಕುಮಾರ್ ರೈ ಜನರ ಪರವಾಗಿ ಪ್ರತಿನಿಧಿಯನ್ನು ಪಡೆದ ಬಂಟ್ವಾಳ ಕ್ಷೇತ್ರದ ಜನ ನಿಜಕ್ಕೂ ಅಭಿಮಾನಪಡಬೇಕು, ಅವರನ್ನು ಸದಾ ಗೌರವಿಸಬೇಕು ಎಂದರು. 

ಶಾಸಕ ಅಲ್ಲದಿದ್ದರೂ, ಪಕ್ಷಕ್ಕೆ ಅಧಿಕಾರ ಇಲ್ಲದಿದ್ದರೂ ರಮಾನಾಥ ರೈ ಅವರು ಸದಾ ಸಮಯ ಕ್ಷೇತ್ರಕ್ಕಾಗಿ ದುಡಿದ ಅಪರೂಪದ ರಾಜಕಾರಣಿಯಾಗಿದ್ದು, ಇಂತಹ ಜನಪರ ಜನಪ್ರತಿನಿಧಿಯನ್ನು ಗೆಲ್ಲಿಸುವ ಜವಾಬ್ದಾರಿ ಕ್ಷೇತ್ರದ ಪ್ರತಿಯೊಬ್ಬ ಮತದಾರನ ಬಾಧ್ಯತೆಯಾಗಿದೆ. ಕಳೆದ ಬಾರಿ ಅದೇನೋ ಇಲ್ಲ-ಸಲ್ಲದ ಅಪಪ್ರಚಾರದಿಂದ ವಾಮಮಾರ್ಗದಲ್ಲಿ ಅವರನ್ನು ವಿರೋಧಿಗಳು ಸೋಲಿಸಿದ್ದಾರೆಯೇ ಹೊರತು ಅಭಿವೃದ್ದಿ ಪರವಾಗಿ ಅವರನ್ನು ಎದುರಿಸಲು ಯಾರಿಂದಲೂ ಯಾವತ್ತೂ ಸಾಧ್ಯವಿಲ್ಲ. ಈ ಬಾರಿ ಗೆಲುವು ಖಂಡಿತವಾಗಿಯೂ ನಮ್ಮದೇ. ರಮಾನಾಥ ರೈ ಅವರಂತಹ ಪ್ರಬುದ್ದ ರಾಜಕಾರಣಿಯ ಅನಿವಾರ್ಯತೆಯನ್ನು ಈ ಕ್ಷೇತ್ರದ ಜನ ಖಂಡಿತವಾಗಿಯೂ ಅರ್ಥ ಮಾಡಿಕೊಂಡಿದ್ದಾರೆ. ರೈ ಅವರು ಸ್ವ ಕ್ಷೇತ್ರ ಮಾತ್ರವಲ್ಲದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರತಿನಿಧಿ ಇಲ್ಲದ ಕ್ಷೇತ್ರವನ್ನು ಕೂಡಾ ದತ್ತು ಪಡೆದು ಅಭಿವೃದ್ದಿಪಡಿಸಿರುವುದು ಅವರ ಉದಾತ್ತ ಮನೋಭಾವಕ್ಕೆ ಸಾಕ್ಷಿ ಎಂದ ಅಶ್ವನಿ ಕುಮಾರ್ ಬಿಜೆಪಿ ರಾಜ್ಯದಲ್ಲಿ ಅನೈತಿಕ ಮಾರ್ಗದಲ್ಲಿ ಸರಕಾರ ರಚಿಸಿಕೊಂಡಿದೆ. ಸ್ಪೀಕರ್ ಅವರನ್ನು ಕೂಡಾ ದುರುಪಯೋಗಪಡಿಸಿಕೊಂಡು ಸರಕಾರ ರಚಿಸಿಕೊಂಡಿದೆ. ಇಂತಹ ಜನ ವಿರೋಧಿ, ವಚನ ಭ್ರಷ್ಟ, ಭ್ರಷ್ಟ ಹಾಗೂ ರಾಜಧರ್ಮ ಪಾಲಿಸದ ಸರಕಾರವನ್ನು ಕಿತ್ತೊಗೆಯುವುದು ರಾಜ್ಯದ ಹಿತದೃಷ್ಟಿಯಿಂದ ಇಂದು ಜನತೆಗೆ ಅನಿವಾರ್ಯವಾಗಿದೆ ಎಂದರು. 

ಸಿದ್ದರಾಮಯ್ಯ ಸರಕಾರ ತನ್ನ ಪ್ರಣಾಳಿಕೆಯಲ್ಲಿ ಜನತೆಗೆ ನೀಡಿದ 90 ಶೇಕಡಾ ಭರವಸೆಗಳನ್ನು ಈಡೇರಿಸಿದೆ. ಆದರೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ 10 ಶೇಕಡಾ ಭರವಸೆಗಳನ್ನೂ ಈಡೇರಿಸದೆ ಜನತೆಯನ್ನು ವಂಚಿಸಿದೆ. 15 ಲಕ್ಷ ಹಣವೂ ಇಲ್ಲ, ಕಪ್ಪು ಹಣದ ವಾಪಸಾತಿಯೂ ಇಲ್ಲ, 2 ಕೋಟಿ ಉದ್ಯೋಗ ಸೃಷ್ಟಿಯೂ ಇಲ್ಲ. ಕಾಂಗ್ರೆಸ್ ವೈಜ್ಞಾನಿಕವಾಗಿ ಸಿದ್ದಪಡಿಸಿದ ಯೋಜನೆಗಳನ್ನು ಬಿಜೆಪಿ ಅವೈಜ್ಞಾನಿಖವಾಗಿ ಜಾರಿ ಮಾಡುವ ಮೂಲಕ ಜನರನ್ನು ಸಂಕಷ್ಟಕ್ಕೆ ತಳ್ಳಿದೆ ಎಂದ ಅವರು ಮುಖ್ಯಮಂತ್ರಿ ಪಟ್ಟ ಕೂಡಾ ಮಾರಾಟಕ್ಕಿದೆ ಎಂದು ಸ್ವತಃ ಸ್ವಪಕ್ಷೀಯ ಶಾಸಕನೇ ಆರೋಪಿಸುವ ಸನ್ನಿವೇಶ ನಿರ್ಮಾಣವಾಗಿದ್ದರೆ ಬಿಜೆಪಿ ಸರಕಾರ ಭ್ರಷ್ಟಾತಿಭ್ರಷ್ಟ ಸರಕಾರ ಎಂಬುದರಲ್ಲಿ ಎರಡು ಮಾತಿಲ್ಲ. ತನ್ನ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ತನಿಖಾ ಸಂಸ್ಥೆಗಳನ್ನು ಕೂಡಾ ಬ್ಲ್ಯಾಕ್ ಮೇಲ್ ಅಸ್ತ್ರವಾಗಿ ಬಳಸಿಕೊಂಡಿದೆ ಎಂದು ಅಶ್ವನಿ ಕುಮಾರ್ ಟೀಕಾಪ್ರಹಾರಗೈದರು. 

ಬಿಜೆಪಿಯ ಸುಳ್ಳುಗಳ ಸರಮಾಲೆಗೆ, ಅಪಪ್ರಚಾರಕ್ಕೆ, ತಿಲಾಂಜಲಿ ಹಾಡಲೇಬೇಕಾಗಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಗೆ ಬದ್ದತೆ ಪ್ರದರ್ಶಿಸಬೇಕಾಗಿದೆ. ಕಾಂಗ್ರೆಸ್ ಇದುವರೆಗೆ ಎಲ್ಲಿಯೂ ಮಾತಿಗೆ ತಪ್ಪಿಲ್ಲ. ಜನರಿಗೆ ನೀಡಿದ ಭರವಸೆಗಳಿಗೆ ಯಾವತ್ತೂ ಬೆನ್ನು ಹಾಕಿಲ್ಲ. ನೀಡಿದ ಎಲ್ಲ ಭರವಸೆಗಳನ್ನು ಪೂರ್ಣವಾಗಿ ಈಡೇರಿಸಿ ಜನರ ಹಿತ ಕಾಪಾಡುವ ಪ್ರಯತ್ನ ಕಾಂಗ್ರೆಸ್ ಯಾವತ್ತೂ ಮಾಡಿದೆ. ಕೊಟ್ಟ ಭರವಸೆ ಈಡೇರಿಸುವ ಬದ್ದತೆ ಕಾಂಗ್ರೆಸ್ ಪಕ್ಷಕ್ಕೆ ಇದೆ. ಭರವಸೆಯ ಯೋಜನೆಗಳಿಗೆ ಆರ್ಥಿಕ ಸಂಪತ್ತು ಕ್ರೋಢೀಕರಿಸಿ ಜನರಿಗೆ ನೀಡುವ ತಂತ್ರಗಾರಿಕೆಯೂ ಕಾಂಗ್ರೆಸ್ ಪಕ್ಷದ ನಾಯಕರಲ್ಲಿದೆ ಎಂದು ಅಶ್ವನಿ ಕುಮಾರ್ ಸ್ಪಷ್ಟಪಡಿಸಿದರು. 

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಸಪಲ್ಯ, ಹಿರಿಯ ಕಾಂಗ್ರೆಸ್ಸಿಗರಾದ ಹಾಜಿ ಬಿ ಎಚ್ ಖಾದರ್, ಬಾಲಚಂದ್ರ ಶೆಟ್ಟಿ, ಪ್ರಮುಖರಾದ ಸದಾಶಿವ ಬಂಗೇರ, ಬಿ ಎಂ ಅಬ್ಬಾಸ್ ಅಲಿ, ಲುಕ್ಮಾನ್ ಬಿ ಸಿ ರೋಡು, ಪದ್ಮಶೇಖರ ಜೈನ್, ಸುದರ್ಶನ್ ಜೈನ್, ಮುಹಮ್ಮದ್ ವಳವೂರು, ಪಿ ಎ ರಹೀಂ, ಸುಭಾಶ್ಚಂದ್ರ ಶೆಟ್ಟಿ, ಚಂದ್ರಶೇಖರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಮಧ್ಯರಾತ್ರಿಯೂ ಕ್ಷೇತ್ರದ ಜನರ ಕೈಗೆ ಸಿಗುವ ಅಪರೂಪದ ರಾಜಕಾರಣಿ ರಮಾನಾಥ ರೈ ಅವರನ್ನು ಗೆಲ್ಲಿಸುವುದು ಜನರ ಬಾಧ್ಯತೆಯಾಗಿದೆ : ಅಶ್ವನಿ ಕುಮಾರ್ ರೈ ಮನವಿ Rating: 5 Reviewed By: karavali Times
Scroll to Top