ಮಂಗಳೂರು, ಎಪ್ರಿಲ್ 25, 2023 (ಕರಾವಳಿ ಟೈಮ್ಸ್) : ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೇರಿದ ಬಳಿಕ ದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿ ಇದೆಯೋ, ಇಲ್ಲವೋ, ಸಂವಿಧಾನ ನಮ್ಮ ರಕ್ಷಣೆ ಮಾಡುತ್ತದೋ ಇಲ್ಲವೋ ಎಂಬ ಸಂಶಯ ಕಾಡತೊಡಗಿದ್ದು, ಈ ನಿಟ್ಟಿನಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಿಸುವ ಹಿನ್ನಲೆಯಲ್ಲಿ ಮುಂಬರುವ ಚುನಾವಣೆಗಳು ಅತ್ಯಂತ ಮಹತ್ವದ್ದಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.
ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕರ್ನಾಟಕದ ಆಡಳಿತ ಬಗ್ಗೆ ಇವತ್ತು ವಿಶೇಷವಾಗಿ ಮಾತನಾಡಬೇಕಿದೆ. ಇಲ್ಲಿ ಎಲ್ಲವೂ ಲಂಚದಿಂದ ಕೂಡಿದೆ. 40 ಶೇಕಡಾ ಕಮಿಷನ್ ನೀಡದೆ ಯಾವುದೇ ಕೆಲಸ-ಕಾರ್ಯಗಳು ನಡೆಯುವುದಿಲ್ಲ. ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದು ಜನರ ಮುಂದೆ ಬೊಬ್ಬೆ ಹಾಕಿ ಅಧಿಕಾರಕ್ಕೇರಿದ ನರೇಂದ್ರ ಮೋದಿ ತಮ್ಮದೇ ಪಕ್ಷದ ನಾಯಕರ ಕಮಿಷನ್ ವಿಷಯದ ಬಗ್ಗೆ ಯಾವುದೇ ಚಕಾರ ಎತ್ತುವುದಿಲ್ಲ. ಎಲ್ಲಾ ತನಿಖಾ ಸಂಸ್ಥೆಗಳು ವಿರೋಧ ಪಕ್ಷಗಳ ನಾಯಕರ ವಿರುದ್ದ ಷಡ್ಯಂತ್ರದ ಭಾಗವಾಗಿ ಮಾತ್ರ ಬಳಕೆಯಾಗುತ್ತಿದೆಯೇ ಹೊರತು ಸ್ವಪಕ್ಷದ ಭ್ರಷ್ಟಾಚಾರಕ್ಕೆ ಎಲ್ಲೂ ಬಳಕೆಯಾಗುತ್ತಿಲ್ಲ ಟೀಕಿಸಿದರು.
ನಿರುದ್ಯೋಗ, ಬಡತನ, ಬೆಲೆ ಏರಿಕೆ, ಭ್ರಷ್ಟಾಚಾರಗಳು ತಾರರಕ್ಕೇರಿದ್ದರೂ ಅದ್ಯಾವುದರ ಬಗ್ಗೆಯೂ ಸರಕಾರ ಚಿಂತೆಯೇ ಮಾಡುತ್ತಿಲ್ಲ. ಕೇಲವ ಧರ್ಮಧಾರಿತವಾಗಿ ಜನರನ್ನು ವಿಭಜಿಸಿ ಮತಗಳಿಕೆಗೆ ಮಾತ್ರ ಮಹತ್ವ ನೀಡಲಾಗುತ್ತಿದೆ ಎಂದು ಖರ್ಗೆ ವಿಷಾದಿಸಿದರು.
ದೇಶಾದ್ಯಂತ ಸರಕಾರಿ ಮಟ್ಟದಲ್ಲಿ 2.60 ಲಕ್ಷ ಹುದ್ದೆಗಳು ಖಾಲಿ ಇದ್ದರೂ ಅದನ್ನು ತುಂಬಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರಕಾರ ಮನಸ್ಸು ಮಾಡುತ್ತಿಲ್ಲ. ಏಕೆಂದರೆ ಈ ಪೈಕಿ ಶೇಕಡಾ 50 ಭಾಗ ಎಸ್ಸಿ, ಎಸ್ಟಿ, ಒಬಿ ಸಮುದಾಯಕ್ಕೆ ಅದು ದಕ್ಕುತ್ತದೆ. ಅವರಿಗೆ ಬೇಕಾದವರಿಗೆ ಅದನ್ನು ಹಂಚಲು ಸಾಧ್ಯವಾಗುತ್ತಿಲ್ಲ ಎಂಬ ಏಕೈಕ ಕಾರಣಕ್ಕಾಗಿ ಹುದ್ದೆಗಳ ಭರ್ತಿ ಮಾಡಲು ಸರಕಾರ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು. ತಮ್ಮ ಕಿಸೆಯಲ್ಲೇ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದರೂ ಚಕಾರವೆತ್ತದ ಮೋದಿ ಇನ್ನೊಂದು ಪಕ್ಷದ ಬಗ್ಗೆ ಮಾತನಾಡುವ ಮೂಲಕ ತನ್ನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಇನ್ನೊಬ್ಬರ ತಟ್ಟೆಯಲ್ಲಿರುವ ನೊಣದ ಬಗ್ಗೆ ಮಾತನಾಡುವ ಸಿದ್ದಾಂತವನ್ನು ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರು ನಗರದ ಸರ್ವ ಅಭಿವೃದ್ದಿಗಳನ್ನೂ ಕಾಂಗ್ರೆಸ್ ಅವಧಿಯಲ್ಲೇ ಮಾಡಲಾಗಿದೆ. ಬಿಜೆಪಿಗರಿಂದ ಮಂಗಳೂರಿಗೆ ನಯಾಪೈಸೆಯ ಕೊಡುಗೆಯೂ ಸಲ್ಲಿಕೆಯಾಗಿಲ್ಲ ಎಂದು ಝಾಡಿಸಿದ ಖರ್ಗೆ ಡಬಲ್ ಇಂಜಿನ್ ಸರಕಾರ ಸಂಪೂರ್ಣ ಕೆಟ್ಟು ಹೋಗಿದೆ. ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ. ಎಲ್ಲವೂ ಕಮಿಷನ್ ಬೇಸ್ ಮೂಲಕ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭ ಮಾಜಿ ಸಚಿವರಾದ ಬಿ ರಮಾನಾಥ ರೈ, ಯು ಟಿ ಖಾದರ್, ಮಾಜಿ ಶಾಸಕರಾದ ಜೆ ಆರ್ ಲೋಬೋ, ಐವನ್ ಡಿ’ಸೋಜ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಎಂಎಲ್ಸಿ ಡಾ ಮಂಜುನಾಥ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment