ತಿರುವನಂತಪುರಂ, ಜುಲೈ 18, 2023 (ಕರಾವಳಿ ಟೈಮ್ಸ್) : ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಉಮ್ಮನ್ ಚಾಂಡಿ (79) ಮಂಗಳವಾರ (ಜುಲೈ 18) ಮುಂಜಾನೆ 4.25ಕ್ಕೆ ಬೆಂಗಳೂರಿನ ಚಿನ್ಮಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ನಿಧನರಾದರು.
ಉಮ್ಮನ್ ಚಾಂಡಿ ಅವರು ಕಳೆದ 50 ವರ್ಷಗಳಿಗೂ ಹೆಚ್ಚು ಕಾಲ ಕೊಟ್ಟಾಯಂ ಜಿಲ್ಲೆಯ ಪುತ್ತುಪಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅವರು ಸದ್ಯ ಪುತ್ತುಪಲ್ಲಿ ಶಾಸಕರಾಗಿದ್ದರು. ಚಾಂಡಿ ಅವರು 1970 ರಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಪುತ್ತುಪಲ್ಲಿಯನ್ನು ಮೊದಲ ಬಾರಿಗೆ ಪ್ರತಿನಿಧಿಸಿದ್ದರು. ಅವರು 1977 ರಲ್ಲಿ ಕೆ ಕರುಣಾಕರನ್ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವರಾಗಿದ್ದರು. ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದ ಅವರು ರಾಜ್ಯದಲ್ಲಿ ಹಣಕಾಸು ಖಾತೆಯನ್ನು ನಿಭಾಯಿಸಿದ್ದರಲ್ಲದೆ ವಿರೋಧ ಪಕ್ಷದ ನಾಯಕರೂ ಆಗಿದ್ದರು.
ಚಾಂಡಿ ಜನರೊಂದಿಗೆ ಉತ್ತಮ ಸಂಪರ್ಕ ಸಾಧಿಸುತ್ತಿದ್ದರು. ಅವರು ಮುಖ್ಯಮಂತ್ರಿಯಾಗಿದ್ದಾಗ ಜನರ ಅಹವಾಲು ಆಲಿಸಲು ಆರಂಭಿಸಿದ ‘ಜನಸಂಪರ್ಕ ಪರಿಪಡಿ’ ಜನಪ್ರಿಯವಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಬೆಂಗಳೂರಿಗೆ ಅವರನ್ನು ವರ್ಗಾಯಿಸಲಾಗಿತ್ತು.
ಚಾಂಡಿ ಅವರ ನಿಧನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಕೇರಳದ ಮಾಜಿ ಮುಖ್ಯಮಂತ್ರಿ ನಿಧನಕ್ಕೆ ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ ಸುಧಾಕರನ್ ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ಪ್ರೀತಿಯಿಂದ ಜಗತ್ತನ್ನು ಗೆದ್ದ ರಾಜನ ಕಥೆಯು ಇದೀಗ ಅಂತ್ಯ ಕಂಡಿದೆ. ಇಂದು, ನಾವು ದಂತಕಥೆಯಾದ ಉಮ್ಮನ್ ಚಾಂಡಿ ಅವರನ್ನು ಕಳೆದುಕೊಂಡಿದ್ದೇವೆ. ಇದರಿಂದ ನನಗೆ ತುಂಬಾ ದುಃಖವಾಗಿದೆ. ಅವರು ಅಸಂಖ್ಯಾತ ವ್ಯಕ್ತಿಗಳ ಜೀವನವನ್ನು ಮತ್ತು ಅವರ ಪರಂಪರೆಯನ್ನು ಬೆಳಗಿಸಿದ್ದರು. ನಮ್ಮ ಆತ್ಮಗಳಲ್ಲಿ ಎಂದೆಂದಿಗೂ ಅವರು ಪ್ರತಿಧ್ವನಿಸುತ್ತಾರೆ’ ಎಂದು ಸುಧಾಕರನ್ ಟ್ವೀಟ್ ಮಾಡಿದ್ದಾರೆ.
ಉಮ್ಮನ್ ಚಾಂಡಿ ಅವರು ಪತ್ನಿ ಮರಿಯಮ್ಮ ಮತ್ತು ಮಕ್ಕಳಾದ ಮರಿಯಾ ಉಮ್ಮನ್, ಚಾಂಡಿ ಉಮ್ಮನ್ ಮತ್ತು ಅಚ್ಚು ಉಮ್ಮನ್ ಅವರನ್ನು ಅಗಲಿದ್ದಾರೆ.
0 comments:
Post a Comment