ದಕ್ಷಿಣ ಕನ್ನಡ ಜಿಲ್ಲೆ ಮಾದಕ ವ್ಯಸನ ಹಾಗೂ ಅನೈತಿಕ ಪೊಲೀಸ್ ಗಿರಿಗೆ ಗೂಂಡಾ ಕಾಯ್ದೆ ಬಳಸಿ ನಿಯಂತ್ರಿಸಿ : ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ತಾಕೀತು - Karavali Times ದಕ್ಷಿಣ ಕನ್ನಡ ಜಿಲ್ಲೆ ಮಾದಕ ವ್ಯಸನ ಹಾಗೂ ಅನೈತಿಕ ಪೊಲೀಸ್ ಗಿರಿಗೆ ಗೂಂಡಾ ಕಾಯ್ದೆ ಬಳಸಿ ನಿಯಂತ್ರಿಸಿ : ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ತಾಕೀತು - Karavali Times

728x90

1 August 2023

ದಕ್ಷಿಣ ಕನ್ನಡ ಜಿಲ್ಲೆ ಮಾದಕ ವ್ಯಸನ ಹಾಗೂ ಅನೈತಿಕ ಪೊಲೀಸ್ ಗಿರಿಗೆ ಗೂಂಡಾ ಕಾಯ್ದೆ ಬಳಸಿ ನಿಯಂತ್ರಿಸಿ : ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ತಾಕೀತು

 ಮಂಗಳೂರು, ಆಗಸ್ಟ್ 01, 2023 (ಕರಾವಳಿ ಟೈಮ್ಸ್) : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ (ಆಗಸ್ಟ್ 01) ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ  ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು. 

ಮಾದಕ ವಸ್ತು ಹಾವಳಿ ಮಂಗಳೂರಿನಲ್ಲಿ ವಿಪರೀತ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಪೊಲೀಸ್ ಇಲಾಖೆ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಗೂಂಡಾ ಕಾಯ್ದೆಯಡಿಯಲ್ಲಿ ಇಂಥ ಸಮಾಜ ಘಾತುಕರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಅಧಿಕಾರಿಗಳಿಗೆ ತಾಕೀತು ಮಾಡಿದರು.


ಅನೈತಿಕ ಪೊಲೀಸ್ ಗಿರಿ ವಿಚಾರದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ಯಾವುದೇ ಗುಂಪು, ಯಾವುದೇ ಸಿದ್ಧಾಂತದವರು ಕಾನೂನು ಕೈಗೆತ್ತಿಕೊಂಡು ಅನೈತಿಕ ಪೊಲೀಸ್ ಗಿರಿ ನಡೆಸಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಸೂಚಿಸಿದ ಸಿದ್ದರಾಮಯ್ಯ ಅತ್ಯಂತ ಹಿಂದುಳಿದ ಜಿಲ್ಲೆ ಚಿತ್ರದುರ್ಗ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿರುವ ಹೊತ್ತಲ್ಲಿ ಅತ್ಯಂತ ಮುಂದಿದ್ದ ದಕ್ಷಿಣ ಕನ್ನಡ ಜಿಲ್ಲೆ ಹಿಂದುಳಿದಿದೆ. ಡಿಡಿಪಿಐ ಆದವರು ಬಿಇಒ ಗಳನ್ನು ಈ ಬಗ್ಗೆ ಪ್ರಶ್ನಿಸಿ, ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಅಗತ್ಯ ಕ್ರಮ ವಹಿಸಬೇಕು ಎಂದರು.

ಆರೋಗ್ಯ ಸೂಚ್ಯಂಕದಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಕುಸಿದಿದೆ. ದಕ್ಷಿಣ ಕನ್ನಡ ಜಿಲ್ಲೆ 2015 ರಲ್ಲಿ 3ನೇ ಸ್ಥಾನದಲ್ಲಿತ್ತು. ಈಗ 23ನೇ ಸ್ಥಾನಕ್ಕೆ ಕುಸಿದಿದೆ. ಎರಡು ವರ್ಷಗಳಿಂದ ಏನು ಪ್ರಗತಿ ಸಾಧಿಸದಿರುವುದು ಗಂಭೀರ ಸಮಸ್ಯೆ. ಕೂಡಲೇ ಈ ಬಗ್ಗೆ ಸಂಬಂಧಿತ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದ ಸಿಎಂ 

ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಇನ್ನು ಮುಂದೆ ಅವರಿಗೆ ನೀಡಿದ ಕ್ವಾಟ್ರಸ್ ಗಳಲ್ಲೇ ನೆಲೆಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಕ್ರಮ ವಹಿಸಬೇಕು ಎಂದರು.

ರೈತರಿಗೆ ಬೀಜ, ರಸಗೊಬ್ಬರದ ಕೊರತೆ ಆಗಬಾರದು. ಒಮ್ಮೆ ಬೀಜ, ರಸಗೊಬ್ಬರ ಕೊಟ್ಟರೆ ಮುಗಿಯಿತು ಎಂದು ಅಧಿಕಾರಿಗಳು ವರ್ತಿಸಬಾರದು. ಬೆಳೆ ಹಾನಿಯಾಗಿ ಮತ್ತೆ ಬೀಜ, ರಸಗೊಬ್ಬರಕ್ಕೆ ರೈತರಿಂದ ಬೇಡಿಕೆ ಬಂದರೆ ತಕ್ಷಣ ಅದನ್ನು ಪೂರೈಸಬೇಕು.

ಅಡಿಕೆಗೆ ಎಲೆಚುಕ್ಕೆ ರೋಗ, ಹಳದಿ ರೋಗ, ಕೀಟಬಾಧೆ ಕಾಡುತ್ತಿದೆ. ಈ ಸಂಬಂಧ ಕೃಷಿ ವಿಜ್ಞಾನಿಗಳು ಹಾಗೂ ತಜ್ಞರನ್ನು ಕರೆದು ಸಭೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಿಎಂ ಹೇಳಿದರು.

ಮೀನುಗಾರರ ದೋಣಿಗಳಿಗೆ ರಿಯಾಯಿತಿ ದರದಲ್ಲಿ ನೀಡುತ್ತಿರುವ ಡೀಸೆಲ್ ಮಿತಿಯನ್ನು 1.5 ಲಕ್ಷ ಕಿಲೋ ಲೀಟರ್ ನಿಂದ 2 ಲಕ್ಷ ಕಿಲೋ ಲೀಟರ್ ಗಳವರೆಗೆ ಹೆಚ್ಚಿಸಿದ್ದೇವೆ. ಇದರಿಂದ ಮೀನುಗಾರರಿಗೆ ಸರಕಾರದಿಂದ 250 ಕೋಟಿ ರೂಪಾಯಿಗಳಷ್ಟು ನೆರವು ನೀಡಿದ್ದೇವೆ. 

ಮೀನುಗಾರಿಕಾ ದೋಣಿಗಳಲ್ಲಿನ ಸೀಮೆ ಎಣ್ಣೆ ಇಂಜಿನ್ ಗಳನ್ನು ಪೆಟ್ರೋಲ್ ಇಂಜಿನ್ ಗಳಾಗಿ ಬದಲಾಯಿಸಲು ತಲಾ 50,000 ರೂಪಾಯಿ ಸಹಾಯಧನ ನೀಡುತ್ತಿದ್ದೇವೆ. ಪ್ರಸಕ್ತ ಸಾಲಿನಲ್ಲಿ 4,000 ಸೀಮೆ ಎಣ್ಣೆ ಇಂಜಿನ್ ಗಳ ಬದಲಾವಣೆಗೆ 20 ಕೋಟಿ ರೂಪಾಯಿ ಸಹಾಯಧನ ಒದಗಿಸಲಾಗುವುದು ಎಂದು ನಾವು ಆಯವ್ಯಯದಲ್ಲಿ ಘೋಷಿಸಿದ್ದೇವೆ, ಈ ಕಾರ್ಯಕ್ರಮ ಸರಿಯಾಗಿ ಜಾರಿಯಾಗುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.

ಶಕ್ತಿ ಯೋಜನೆಗೆ ಜನರಿಂದ ಮತ್ತು ವಿದ್ಯಾರ್ಥಿ ಸಮೂಹದಿಂದ ಉತ್ತಮ ಸ್ಪಂದನೆ ಇರುವುದರಿಂದ ಸದ್ಯದಲ್ಲೇ 4,000 ಹೆಚ್ಚುವರಿ ಬಸ್ ಗಳನ್ನು ಖರೀದಿಸಲಾಗುವುದು ಎಂದ ಸಿಎಂ

ಸರಕಾರದ ಐದೂ ಗ್ಯಾರಂಟಿ ಯೋಜನೆಗಳ ಲಾಭ ಜಿಲ್ಲೆಯ ಪ್ರತಿಯೊಬ್ಬ ಫಲಾನುಭವಿಗೂ ದೊರಕುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು.

ಈ ಸಂದರ್ಭ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಚಿವೆ ಶ್ರೀಮತಿ ಲಕ್ಷ್ಮೀ ಆರ್ ಹೆಬ್ಬಾಳ್ಕರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್,  ಜಿಲ್ಲಾಧಿಕಾರಿ ಮುಲ್ಲೈ ‌ಮುಗಿಲನ್, ಜಿ.ಪಂ ಸಿಇಓ ಡಾ. ಆನಂದ,  ಉಪಕಾರ್ಯದರ್ಶಿ ಕೆ. ಆನಂದ ಕುಮಾರ್, ಮೇಯರ್ ಜಯಾನಂದ ಅಂಚನ್, ಶಾಸಕರಾದ ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್, ರಾಜೇಶ್ ನಾಯಕ್, ಭಾಗಿರಥಿ ಮುರುಳ್ಯ ಹಾಗೂ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್, ಪ್ರತಾಪ ಸಿಂಹ ನಾಯಕ್, ಮಂಜುನಾಥ್ ಭಂಡಾರಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ದಕ್ಷಿಣ ಕನ್ನಡ ಜಿಲ್ಲೆ ಮಾದಕ ವ್ಯಸನ ಹಾಗೂ ಅನೈತಿಕ ಪೊಲೀಸ್ ಗಿರಿಗೆ ಗೂಂಡಾ ಕಾಯ್ದೆ ಬಳಸಿ ನಿಯಂತ್ರಿಸಿ : ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ತಾಕೀತು Rating: 5 Reviewed By: lk
Scroll to Top