ಬಂಟ್ವಾಳ, ಆಗಸ್ಟ್ 22, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಜಿಪಮುನ್ನೂರು ಕ್ಷೇತ್ರದ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ನೇತೃತ್ವದ ನಿಯೋಗ ಇದೀಗ ಮತ್ತೊಮ್ಮೆ ಬಂಟ್ವಾಳ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಸಜಿಪಮುನ್ನೂರು ಗ್ರಾಮದಲ್ಲಿ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯನಿಂದಲೇ ಅತಿಕ್ರಮಣಗೊಂಡಿರುವ ಸಾರ್ವಜನಿಕ ಹಿಂದೂ ರುದ್ರಭೂಮಿಯ ಜಮೀನು ತೆರವುಗೊಳಿಸಿ ತಕ್ಷಣ ಸ್ಮಶಾನ ನಿರ್ಮಿಸುವಂತೆ ಮಂಗಳವಾರ ಆಗ್ರಹಿಸಿದೆ.
ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಉಪತಹಶೀಲ್ದಾರ್ ನರೇಂದ್ರನಾಥ ಮಿತ್ತೂರು ಅವರ ಮೂಲಕ ಸರಕಾರಕ್ಕೆ ಲಿಖಿತ ಮನವಿ ಸಲ್ಲಿಸಿ ಚಂದ್ರಪ್ರಕಾಶ್ ಶೆಟ್ಟಿ ನೇತೃತ್ವದ ನಿಯೋಗ ಸರಕಾರ ಈಗಾಗಲೇ ಪ್ರತಿ ಗ್ರಾಮದಲ್ಲೂ ಸ್ಮಶಾನ ನಿರ್ಮಿಸುವಂತೆ ಸುತ್ತೋಲೆ ಹೊರಡಿಸಿದೆ ಮಾತ್ರವಲ್ಲ ಸಜಿಪಮುನ್ನೂರು ಗ್ರಾಮದಲ್ಲಿ ಸ್ಮಶಾನ ನಿರ್ಮಿಸುವಂತೆ ಸಜಿಪಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ, 6ನೇ ವಾರ್ಡಿನ ಆಲಾಡಿ-ಶಾರದಾ ನಗರದಲ್ಲಿ ಸಜಿಪಮುನ್ನೂರು ಗ್ರಾಮದ ಸರ್ವೆ ನಂಬ್ರ 29/1 ರ 0.50 ಎಕ್ರೆ ಜಮೀನನ್ನು 1994-95ರಲ್ಲೇ ಕಮಿಷನರ್ ಆದೇಶ ಸಂಖ್ಯೆ ಎಲ್ ಎನ್ ಡಿ ಸಿ ಆರ್ 153/94-95ರಂತೆ ಸಾರ್ವಜನಿಕ ಸ್ಮಶಾನಕ್ಕೆ ಮೀಸಲಾಗಿಡಲಾಗಿದೆ. ಸದ್ರಿ ಸ್ಮಶಾನ ಜಾಗದಲ್ಲಿ ಇನ್ನೂ ಸ್ಮಶಾನ ನಿರ್ಮಾಣ ಆಗಿಲ್ಲ ಮಾತ್ರವಲ್ಲ ಸದ್ರಿ ಮೀಸಲು ಜಮೀನನ್ನು ಪಂಚಾಯತಿನ ಸದಸ್ಯರೇ ಅಕ್ರಮವಾಗಿ ಕಬಳಿಸಿ ಕೃಷಿ-ಕೃತಾವಳಿ ಮಾಡಿಕೊಂಡು ಫಸಲಿನ ಲಾಭವನ್ನು ವೈಯುಕ್ತಿಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಕಳೆದ ಗ್ರಾಮಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಆಕ್ರಮಿತ ಜಮೀನನ್ನು ವಶಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರ ಪರವಾಗಿ ಆಗ್ರಹಿಸಲಾಗಿತ್ತು. ಬಳಿಕ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಬಂಟ್ವಾಳ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಸ್ಮಶಾನ ಭೂಮಿ ಕಬಳಿಸಿದ ಬಗ್ಗೆ ಗಮನ ಸೆಳೆಯಲಾಗಿದೆಯಲ್ಲದೆ ತಕ್ಷಣ ಗ್ರಾಮದಲ್ಲಿ ಸ್ಮಶಾನ ನಿಮಾಣ ಮಾಡುವಂತೆ ಆಗ್ರಹಿಸಲಾಗಿತ್ತು. ಆದರೂ ಇನ್ನೂ ಈ ಬಗ್ಗೆ ಕ್ರಮ ಜರುಗದ ಕಾರಣ ಇದೀಗ ಮತ್ತೊಮ್ಮೆ ಮನವಿ ನೀಡಲಾಗುತ್ತಿದೆ ಎಂದು ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿದ ಉಪತಹಶೀಲ್ದಾರ್ ಪ್ರತಿ ಗ್ರಾಮದಲ್ಲಿಯೂ ಸ್ಮಶಾನ ನಿರ್ಮಾಣ ಮೂಲಭೂತ ಅವಶ್ಯಕತೆಯಾಗಿದ್ದು, ಇದು ಸಜಿಪಮುನ್ನೂರು ಗ್ರಾಮದಲ್ಲಿ ಇಲ್ಲದೆ ಇರುವುದರಿಂದ ಈ ಬಗ್ಗೆ ಶೀಘ್ರ ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ಜರುಗುವಂತೆ ಪ್ರಯತ್ನಿಸಲಾಗುವುದು ಎಂದರು.
ನಿಯೋಗದಲ್ಲಿ ಸಜಿಪಮುನ್ನೂರು ಗ್ರಾ ಪಂ ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ, ಸಜಿಪಮೂಡ ಗ್ರಾ ಪಂ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಪೂಂಜಾ, ಪ್ರಮುಖರಾದ ಸುಬ್ರಹ್ಮಣ್ಯ ಭಟ್, ಪರಮೇಶ್ವರ, ಧನಂಜಯ ಶೆಟ್ಟಿ ಪರಾರಿ, ಜನಾರ್ದನ ಮೂಲ್ಯ, ವಿಶ್ವನಾಥ ಪೂಜಾರಿ, ಜಯಂತಿ ಶಾಂತಿನಗರ, ಸುಧೀರ್ ಕಾನ್ಸಾಲೆ, ಇಬ್ರಾಹಿಂ ಕೈಲಾರ್, ಎನ್ ಕೆ ಉಮರಬ್ಬ ನಂದಾವರ ಮೊದಲಾದವರಿದ್ದರು.
0 comments:
Post a Comment