ಬಂಟ್ವಾಳ, ಆಗಸ್ಟ್ 23, 2023 (ಕರಾವಳಿ ಟೈಮ್ಸ್) : ಬಿ ಸಿ ರೋಡು ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣಲ್ಲಿರುವ ವಿದ್ಯಾರ್ಥಿ ಬಸ್ ಪಾಸ್ ಕೌಂಟರಿನಲ್ಲಿರುವ ಸಿಬ್ಬಂದಿ ವಿನ್ಸೆಂಟ್ ಎಂಬವರು ವಿದ್ಯಾರ್ಥಿಗಳನ್ನು ವಿನಾ ಕಾರಣ ಕುಂಟು ನೆಪವೊಡ್ಡಿ ಮತ್ತೆ ಅಲೆದಾಡಿಸುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆ ಎಸ್ ಆರ್ ಟಿ ಸಿ ನಿಗಮದ ನೂತನ ತಂತ್ರಜ್ಞಾನದಂತೆ ವಿದ್ಯಾರ್ಥಿ ಬಸ್ ಪಾಸ್ ವಿತರಿಸುವ ಕ್ರಮವನ್ನು ಪೂರ್ಣವಾಗಿ ಆನ್ ಲೈನ್ ಪ್ರಕ್ರಿಯೆಗೆ ಹೊಂದಿಸಿಕೊಂಡಿದ್ದು, ಸುಲಭ ಹಾಗೂ ಸಲೀಸಾಗಿ ಬಸ್ ಪಾಸ್ ವಿತರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಸೇವಾ ಸಿಂಧು ಆನ್ ಲೈನ್ ಪೋರ್ಟಲ್ ಮೂಲಕ ಆನ್ ಲೈನ್ ಮೂಲಕವೇ ಎಲ್ಲಾ ವಿವರಗಳನ್ನು ತುಂಬಿ ಪೂರಕ ದಾಖಲೆಗಳನ್ನು ಅಪ್ಲೋಡ್ ಮಾಡಿ ಬಳಿಕ ಪಾಸ್ ಪಡೆಯಲು ಹಾಗೂ ನಗದು ಪಾವತಿಸಲು ಮಾತ್ರ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ವಿದ್ಯಾರ್ಥಿಗಳು, ಪೋಷಕರು ಅಥವಾ ಶಾಲಾ-ಕಾಲೇಜು ಮುಖ್ಯಸ್ಥರು ತೆರಳಿದರೆ ಸಾಕಾಗುತ್ತಿದೆ. ಆದರೆ ಎಲ್ಲ ವಿವರಗಳನ್ನು ಆನ್ ಲೈನ್ ಮೂಲಕ ತುಂಬಿಕೊಂಡು ಪೂರಕ ದಾಖಲೆಗಳನ್ನೂ ಅಪ್ಲೋಡ್ ಮಾಡಿ ಪಾಸ್ ಪಡೆಯಲು ವಿದ್ಯಾರ್ಥಿಗಳು ತೆರಳಿದರೆ ಬಸ್ ಪಾಸ್ ಕೌಂಟರಿನಲ್ಲಿರುವ ಸಿಬ್ಬಂದಿ ವಿನ್ಸೆಂಟ್ ಅವರು ಮಾತ್ರ ವಿನಾ ಕಾರಣ ಅಲೆದಾಡಿಸುವುದು, ಆನ್ ಲೈನ್ ಸಲ್ಲಿಸಿದ ವಿವರಗಳನ್ನು ತಿರಸ್ಕರಿಸಿ ಮತ್ತೆ ನಿಗದಿತ ಸೈಬರ್ ಸೆಂಟರಿಗೆ ತೆರಳಿ ಮರು ಅಪ್ಲೋಡ್ ಮಾಡುವಂತೆ ಹೇಳಿ ಕಳಿಸುವ ಮೂಲಕ ಸರಕಾರ ಸರಳೀಕರಣಗೊಳಿಸಿದ ಯೋಜನೆಯ ಲಾಭ ಪಡೆಯಲು ವಿದ್ಯಾರ್ಥಿಗಳು ದಿನಗಟ್ಟಲೆ ತರಗತಿ ಬಿಟ್ಟು, ಹಣ ವ್ಯಯಿಸಿ ಪೇಟೆ ಪಟ್ಟಣ ತಿರುಗಾಡುವಂತೆ ಮಾಡುವ ಬಗ್ಗೆ ಆರೋಪಿಸುತ್ತಿದ್ದಾರೆ.
ಆರಂಭದಲ್ಲಿ ಸರಕಾರ ನಿಗದಿಪಡಿಸಿದ ಮೊತ್ತವನ್ನು ವಿದ್ಯಾರ್ಥಿಗಳು ಪಾವತಿಸಿದರೂ ಹೆಚ್ಚುವರಿ ಹಣ ನೀಡುವಂತೆ ವಿದ್ಯಾರ್ಥಿಗಳನ್ನು ಇದೇ ಸಿಬ್ಬಂದಿ ಸತಾಯಿಸುತ್ತಿದ್ದ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಪೊಲೀಸರಿಗೆ ಹಾಗೂ ನಿಗಮದ ಅಧಿಕಾರಿಗಳಿಗೆ ದೂರಿಕೊಂಡಿದ್ದರು. ಬಳಿಕ ಪೊಲೀಸರು ಕರೆಸಿ ಸೂಕ್ತ ಎಚ್ಚರಿಕೆ ನೀಡಿದ ಬಳಿಕ ಒಂದೆರಡು ದಿನ ಸುಮ್ಮನಾಗಿದ್ದು ಬಳಿಕ ವಿನಾ ಕಾರಣ ವಿದ್ಯಾರ್ಥಿಗಳನ್ನು ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಈ ಬಗ್ಗೆ ಈಗಾಗಲೇ ವಿದ್ಯಾರ್ಥಿಗಳು ಹಾಗೂ ಪೋಷಕರು ಸಾಕಷ್ಟು ಬಾರಿ ಕೆ ಎಸ್ ಆರ್ ಟಿ ಸಿ ಪುತ್ತೂರು ವಿಭಾಗದ ಅಧಿಕಾರಿಗಳಿಗೆ ಮೌಖಿಕವಾಗಿ ದೂರಿಕೊಂಡಿದ್ದು, ಅಧಿಕಾರಿಗಳು ಕೂಡ ಈ ಸಿಬ್ಬಂದಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಕೂಡಾ ಸಿಬ್ಬಂದಿಯ ವರ್ತನೆಯಲ್ಲಿ ಪರಿವರ್ತನೆಯಾಗಿರುವುದಿಲ್ಲ. ಸರಕಾರಕ್ಕೆ ರಿಯಾಯಿತಿ ದರದ ಮೊತ್ತವನ್ನು ಪಾವತಿಸಿ ಪಡೆದುಕೊಳ್ಳುವ ಬಸ್ಸು ಪಾಸಿಗಾಗಿ ಎಲ್ಲ ದಾಖಲೆಗಳಿದ್ದು, ಶಾಲಾ-ಕಾಲೇಜು ಮುಖ್ಯಸ್ಥರು ದೃಢೀಕರಿಸಿಯೂ ಸರಕಾರ ನಿಗದಿಪಡಿಸಿದ ರಿಯಾಯಿತಿ ದರದ ಬಸ್ಸು ಪಾಸು ವಿತರಿಸಲು ಸಿಬ್ಬಂದಿಗಳಿಗಿರುವ ತೊಂದರೆಯಾದರೂ ಏನು? ದೇವರು ಕೊಟ್ಟರೂ ಪೂಜಾರಿ ಬಿಡ ಎಂಬ ನಡೆ ಸಿಬ್ಬಂದಿಗಳು ಅನುಸರಿಸುತ್ತಿರುವರಾದರೂ ಯಾತಕ್ಕೆ? ವಿದ್ಯಾರ್ಥಿಸ್ನೇಹಿಯಾಗಿ ನಡೆದುಕೊಂಡರೆ ಸಿಬ್ಬಂದಿಗೆ ಆಗುವ ನಷ್ಟವಾದರೂ ಏನು ಎಂದು ಪ್ರಶ್ನಿಸುತ್ತಿರುವ ವಿದ್ಯಾರ್ಥಿ ಪೋಷಕರು ಇಂತಹ ಸತಾವಣೆಯ ಸಿಬ್ಬಂದಿಗಳ ಮೇಲೆ ನಿಗಮದ ಹಿರಿಯ ಅಧಿಕಾರಿಗಳು ಹಾಗೂ ಸರಕಾರ ಸೂಕ್ತ ಕ್ರಮ ಜರುಗಿಸಿ ವಿದ್ಯಾರ್ಥಿಸ್ನೇಹಿ, ಜನಸ್ನೇಹಿ ಸಿಬ್ಬಂದಿಗಳನ್ನು ತಕ್ಷಣ ನೇಮಕ ಮಾಡಬೇಕು. ತಪ್ಪಿದಲ್ಲಿ ನಿಗಮದ ಕಚೇರಿ ಮುಂದೆ ವಿದ್ಯಾರ್ಥಿ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಎಚ್ಚರಿಸಿದ್ದಾರೆ.
0 comments:
Post a Comment