ಪುತ್ತೂರು, ಆಗಸ್ಟ್ 27, 2023 (ಕರಾವಳಿ ಟೈಮ್ಸ್) : ಪ್ರೀತಿಸಿದ ಮಹಿಳೆ ಕರೆ ಸ್ವೀಕರಿಸದೆ ತಾತ್ಸಾರ ತೋರಿದ ಹಾಗೂ ಮಹಿಳೆಯ ಪತಿ ಗುಂಪು ಸೇರಿಸಿಕೊಂಡು ಹಲ್ಲೆ ನಡೆಸಿದ್ದರಿಂದ ಅವಮಾನಗೊಂಡು ಆಗಸ್ಟ್ 22 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಪುತ್ತೂರು ತಾಲೂಕು, ಕೆದಂಬಾಡಿ ಗ್ರಾಮದ ನಿವಾಸಿ ಅಬ್ದುಲ್ ನಾಸಿರ್ (28) ಚಿಕಿತ್ಸೆ ಫಲಿಸದೆ ಭಾನುವಾರ (ಆ 27) ಮಧ್ಯಾಹ್ನ ಮೃತಪಟ್ಟಿದ್ದಾರೆ.
ನಾಸಿರ್ ಆ 17 ರಂದು ರಾತ್ರಿ ಬೆಳ್ಳಾರೆ ಗ್ರಾಮದ ನಿವಾಸಿ ಅದ್ರಾಮ ಎಂಬವರ ಮಗಳ ಚಿಕಿತ್ಸೆಗಾಗಿ ಅವರ ಕಾರಿನಲ್ಲಿ ಚಾಲಕನಾಗಿ ಅದ್ರಾಮರವರ ಪತ್ನಿ ಹಾಗೂ ಮಗಳೊಂದಿಗೆ ಆಸ್ಪತ್ರೆಗೆ ಹೋಗಿ ವಾಪಾಸ್ಸು ಮನೆಗೆ ಅವರನ್ನು ಬಿಟ್ಟು ವಾಪಾಸು ನಾಸಿರ್ ತನ್ನ ಮನೆಗೆ ತೆರಳುತ್ತಿದ್ದಾಗ ಆರೋಪಿಗಳಾದ ಅದ್ರಾಮ ಹಾಗೂ ಮೊಯ್ದು, ತಾಜು, ಅಬ್ದುಲ್ಲಾ, ಸಮೀರ್ ಮತ್ತು ಇತರರು ಸೇರಿ ಅದ್ರಾಮರವರ ಪತ್ನಿಯನ್ನು ಪ್ರೀತಿಸುತ್ತಿರುವ ಹಿನ್ನೆಲೆಯಲ್ಲಿ ತಗಾದೆ ತೆಗೆದು ನಾಸಿರ್ ಅವರನ್ನು ತಡೆದು ನಿಲ್ಲಿಸಿ ಕೈಯಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ಪುತ್ತೂರಿನ ಕೂರ್ನಡ್ಕ ಎಂಬಲ್ಲಿ ಕಾರಿನಿಂದ ಇಳಿಸಿ ಹೋಗಿದ್ದರು ಎನ್ನಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಸಿರ್ ತಾನು ಪ್ರೀತಿಸುತ್ತಿರುವ ಅದ್ರಾಮರವರ ಪತ್ನಿಯು ತನ್ನ ದೂರವಾಣಿ ಕರೆ ಸ್ವೀಕರಿಸದೇ ತಾತ್ಸಾರ ಮಾಡುತ್ತಿರುವುದರಿಂದ ಹಾಗೂ ಆರೋಪಿಗಳಾದ ಅದ್ರಾಮ ಮತ್ತು ಇತರರು ಹಲ್ಲೆ ಮಾಡಿರುವುದರಿಂದ ಅವಮಾನಗೊಂಡು ಆಗಸ್ಟ್ 22 ರಂದು ಮಂಗಳವಾರ ಪುತ್ತೂರು-ಸಂಟ್ಯಾರಿನ ಸಮೀಪ ಕಟ್ಟತ್ತಾರು ಎಂಬಲ್ಲಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 55/2023 ಕಲಂ 341, 323, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.
ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ನಾಸಿರ್ ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದು, ಈ ಬಗ್ಗೆ ಮೃತರ ತಾಯಿ ಶ್ರೀಮತಿ ನೆಬಿಸ ಅವರು ತನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳಲು ಆರೋಪಿಗಳಾದ ಸುಮಯ್ಯ, ಅದ್ರಾಮ, ಮೊಯ್ದು, ತಾಜು, ಅಬ್ದುಲ್ಲ, ಸಮೀರ್, ನೌಫಲ್, ಅತ್ತಾವುಲ್ಲಾ ಎಂಬವರುಗಳೇ ಕಾರಣ ಎಂದು ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 80/2023 ಕಲಂ 306 ಆರ್/ಡಬ್ಲ್ಯು 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment