ಬಿ.ಸಿ.ರೋಡು : ಟೆಂಪೋ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ದಾರುಣ ಮೃತ್ಯು, ಸಹಸವಾರಗೆ ಗಾಯ - Karavali Times ಬಿ.ಸಿ.ರೋಡು : ಟೆಂಪೋ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ದಾರುಣ ಮೃತ್ಯು, ಸಹಸವಾರಗೆ ಗಾಯ - Karavali Times

728x90

24 February 2024

ಬಿ.ಸಿ.ರೋಡು : ಟೆಂಪೋ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ದಾರುಣ ಮೃತ್ಯು, ಸಹಸವಾರಗೆ ಗಾಯ

ಬಂಟ್ವಾಳ, ಫೆಬ್ರವರಿ 25, 2024 (ಕರಾವಳಿ ಟೈಮ್ಸ್) : ತರಕಾರಿ ಸಾಗಾಟದ ಟೆಂಪೋ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ದಾರುಣವಾಗಿ ಮೃತಪಟ್ಟು ಸಹಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಿ ಸಿ ರೋಡಿನಲ್ಲಿ ಭಾನುವಾರ (ಫೆ 25) ಮುಂಜಾನೆ ವೇಳೆ ಸಂಭವಿಸಿದೆ. 

ಮೃತ ಸ್ಕೂಟರ್ ಸವಾರನನ್ನು ಮೂಲತಃ ಫರಂಗಿಪೇಟೆ ಸಮೀಪದ ಅಮ್ಮೆಮಾರು ನಿವಾಸಿ, ಪ್ರಸ್ತುತ ಪಾಣೆಮಂಗಳೂರು ಸಮೀಪದ ಆಲಡ್ಕದಲ್ಲಿ ವಾಸವಾಗಿರುವ ಅಶ್ರಫ್ (36) ಹಾಗೂ ಗಾಯಗೊಂಡ ಸಹಸವಾರನನ್ನು ಆತನ ಸ್ನೇಹಿತ ಆಲಡ್ಕ ನಿವಾಸಿ ತನ್ವೀರ್ ಎಂದು ಹೆಸರಿಸಲಾಗಿದೆ.

ಮೆಲ್ಕಾರಿನ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿರುವ ಅಶ್ರಫ್ ಶನಿವಾರ ರಾತ್ರಿ ಬ್ರಹ್ಮರಕೂಟ್ಲು ಸಮೀಪದಲ್ಲಿ ನಡೆದ ಕ್ರೀಡಾಕೂಟ ವೀಕ್ಷಿಸಿ ತನ್ನ ಸ್ನೇಹಿತ ಮೂಲತಃ ನೆಹರುನಗರ ನಿವಾಸಿ, ಪ್ರಸ್ತುತ ಆಲಡ್ಕದಲ್ಲಿ ವಾಸವಾಗಿರುವ ತನ್ವೀರ್ ಜೊತೆ ಸ್ಕೂಟರಿನಲ್ಲಿ ಭಾನುವಾರ ಮುಂಜಾನೆ ವಾಪಾಸು ಬರುತ್ತಿದ್ದ ವೇಳೆ ಕೈಕಂಬ-ಬಿ ಸಿ ರೋಡು ಮಧ್ಯೆ ಹೆದ್ದಾರಿ ಬದಿಯಲ್ಲಿರುವ ರಖಂ ತರಕಾರಿ ಹಾಗೂ ಹಣ್ಣು ಹಂಪಲು ವ್ಯಾಪಾರದ ಅಂಗಡಿಯ ಮುಂಭಾಗದಲ್ಲಿ ಅನ್ ಲೋಡ್ ಮಾಡಿದ ಟೆಂಪೋ ಚಾಲಕ ಹಠಾತ್ ಆಗಿ ಹೆದ್ದಾರಿಗೆ ರಿವರ್ಸ್ ಬಂದ ಪರಿಣಾಮ ಹೆದ್ದಾರಿಯಲ್ಲಿ ಬರುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. 

ಅಪಘಾತದಿಂದ ಗಂಭೀರ ಗಾಯಗೊಂಡ ಅಶ್ರಫ್ ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಲಾಯಿತಾದರೂ ಅದಾಗಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಸ್ನೇಹಿತ ತನ್ವೀರ್ ಅವರ ಕಾಲಿಗೆ ಪೆಟ್ಟು ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರು, ಪತ್ನಿ ಹಾಗೂ ಅಪ್ರಾಪ್ತ ಹೆಣ್ಣು ಮಗುವನ್ನು ಹೊಂದಿದ್ದು, ಪತ್ನಿ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಮೃತದೇಹ ಮರಣೋತ್ತರ ಪರೀಕ್ಷೆ ಬಳಿಕ ಅಪರಾಹ್ನದ ವೇಳೆಗೆ ಆಲಡ್ಕ ಪಡ್ಪುವಿನ ಪತ್ನಿ ಮನೆಗೆ ತರಲಾಗುತ್ತಿದ್ದು, ಬಳಿಕ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಬಿ ಸಿ ರೋಡಿನ ಈ ಪರಿಸರದಲ್ಲಿ ಪ್ರತಿ ದಿನ ಕೂಡಾ ತರಕಾರಿ ಹಾಗೂ ಹಣ್ಣು-ಹಂಪಲು ಅಂಗಡಿಗೆ ಬರುವ ಘನ ವಾಹನಗಳು ಲೋಡ್ - ಅನ್ ಲೋಡ್ ಬಳಿಕ ಹಠಾತ್ ಆಗಿ ಹಾಗೂ ಬೇಜವಾಬ್ದಾರಿಯಾಗಿ ಹೆದ್ದಾರಿಗೆ ಬರುತ್ತಿರುವುದು ಕಂಡುಬರುತ್ತಿದ್ದು, ಇದರಿಂದ ನಿತ್ಯವೂ ಸಣ್ಣಪುಟ್ಟ ಅಪಘಾತಗಳು ಸಂಭವಸುತ್ತಲೇ ಇರುತ್ತದೆ ಎನ್ನುವ ಸ್ಥಳೀಯರು ಸಂಬಂಧಪಟ್ಟವರು ಸೂಕ್ತ  ಕೈಗೊಳ್ಳದೆ ಇರುವ ಪರಿಣಾಮ ಇದೀಗ ಯುವಕ ಪ್ರಾಣ ತೆರುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು : ಟೆಂಪೋ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ದಾರುಣ ಮೃತ್ಯು, ಸಹಸವಾರಗೆ ಗಾಯ Rating: 5 Reviewed By: lk
Scroll to Top