ಬಂಟ್ವಾಳ, ಮೇ 20, 2024 (ಕರಾವಳಿ ಟೈಮ್ಸ್) : ಕಾರೊಂದು ಹಿಟ್ ಆಂಡ್ ರನ್ ಅಪಘಾತ ನಡೆಸಿದ ಪರಿಣಾಮ ಸ್ಕೂಟರ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಮಂಚಿ ಗ್ರಾಮದ ಕೋಕಳ ಸಮೀಪದ ನೂಜಿ-ಕಾರ್ಯಪಡ್ಪು ಬಳಿ ಸೋಮವಾರ ಮಧ್ಯಾಹ್ನ ವೇಳೆ ನಡೆದಿದೆ.
ಮೃತ ಸ್ಕೂಟರ್ ಸವಾರನನ್ನು ಪುತ್ತೂರು-ನೆಹರುನಗರ ಸಮೀಪದ ಕಲ್ಲೆಗ ನಿವಾಸಿ, ನಿವೃತ್ತ ಸೈನಿಕ ಎಂ ಚಿದಾನಂದ ಕಾಮತ್ (55) ಎಂದು ಹೆಸರಿಸಲಾಗಿದೆ. ಮುಡಿಪು ಬಳಿಯ ಸಂಸ್ಥೆಯೊಂದರಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿರುವ ಚಿದಾನಂದ ಕಾಮತ್ ಅವರು ತನ್ನ ಕೆಎ21 ಇಬಿ8019 ನೋಂದಣಿ ಸಂಖ್ಯೆಯ ಆಕ್ಟಿವಾ ಸ್ಕೂಟರಿನಲ್ಲಿ ಸಾಲೆತ್ತೂರು ಮಾರ್ಗವಾಗಿ ಮುಡಿಪುಗೆ ತೆರಳುತ್ತಿದ್ದ ವೇಳೆ ಕೆಎ19 ಎಂಜಿ3926 ನೋಂದಣಿ ಸಂಖ್ಯೆಯ ಕಾರು ಚಾಲಕ ಹಿಟ್ ಆಂಡ್ ರನ್ ಅಪಘಾತ ನಡೆಸಿದ ಪರಿಣಾಮ ಈ ಅವಘಡ ಸಂಭವಿಸಿದೆ.
ಅಪಘಾತದಿಂದ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಚಿದಾನಂದ ಕಾಮತ್ ಅವರುನ್ನು ತಕ್ಷಣ ಸ್ಥಳೀಯರು ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆಗೆ ಸ್ಪಂದಿಸದ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆರೋಪಿ ಕಾರು ಚಾಲಕ ಅಪಘಾತ ಸ್ಥಳದಲ್ಲಿ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ.
ಮೃತ ಚಿದಾನಂದ ಅವರು ಅವಿವಾಹಿತರಾಗಿದ್ದು, ಪುತ್ತೂರಿನಲ್ಲಿ ತಾಯಿ ಜೊತೆ ವಾಸವಾಗಿದ್ದರು. ಕಾಮತ್ ಅವರು ತಾಯಿ ಹಾಗೂ ಐವರು ಸಹೋದರರನ್ನು ಅಗಲಿದ್ದಾರೆ. ಈ ಬಗ್ಗೆ ಮೃತ ಚಿದಾನಂದ ಕಾಮತ್ ಅವರು ಸಹೋದರ ರಮಾನಂದ ಕಾಮತ್ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment