ಬಂಟ್ವಾಳ, ಮೇ 20, 2024 (ಕರಾವಳಿ ಟೈಮ್ಸ್) : ಬೈಕ್ ಹಾಗೂ ಅಟೋ ರಿಕ್ಷಾ ನಡುವೆ ಅಪಘಾತದಲ್ಲಿ ಅಟೋ ರಿಕ್ಷಾ ಪ್ರಯಾಣಿಕನೋರ್ವ ರಸ್ತೆಗೆಸೆಯಲ್ಪಟ್ಟು ದಾರುಣವಾಗಿ ಮೃತಪಟ್ಟ ಘಟನೆ ಪಾಣೆಮಂಗಳೂರು ಪೇಟೆಯ ಕೆನರಾ ಬ್ಯಾಂಕ್ ಬಳಿ ಸೋಮವಾರ ಸಂಜೆ ವೇಳೆ ಸಂಭವಿಸಿದೆ.
ಮೃತ ಅಟೋ ರಿಕ್ಷಾ ಸವಾರನನ್ನು ಸಜಿಪನಡು-ಕಂಚಿನಡ್ಕಪದವು ನಿವಾಸಿ ಡೈಮಂಡ್ ಸಲೀಂ ಎಂಬವರ ಪುತ್ರ ಅಲ್ತಾಫ್ (19) ಎಂದು ಹೆಸರಿಸಲಾಗಿದೆ. ಸಜಿಪ ಕಡೆಯಿಂದ ಬಿ ಸಿ ರೋಡು ಕಡೆಗೆ ಪಾಣೆಮಂಗಳೂರು ಪೇಟೆಯಾಗಿ ಬರುತ್ತಿದ್ದ ಕೆಎ 70 7629 ನೋಂದಣಿ ಸಂಖ್ಯೆಯ ಮುಹಮ್ಮದ್ ಶಬೀರ್ ಎಂಬವರು ಚಲಾಯಿಸುತ್ತಿದ್ದ ಅಟೋ ರಿಕ್ಷಾ ಬಿ ಸಿ ರೋಡು ಕಡೆಯಿಂದ ಪಾಣೆಮಂಗಳೂರು ಕಡೆಗೆ ಬರುತ್ತಿದ್ದ ಇಬ್ಬರು ಪ್ರಯಾಣಿಸುತ್ತಿದ್ದ ಕೆಎ19 ಎಚ್ ಬಿ 7026 ನೋಂದಣಿ ಸಂಖ್ಯೆಯ ಬೈಕಿಗೆ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ಮೀರಿ ಅಟೋ ರಿಕ್ಷಾ ರಸ್ತೆ ಮಧ್ಯದಲ್ಲಿ ಉರುಳಿ ಬಿದ್ದಿದೆ. ಅಟೋ ರಿಕ್ಷಾ ಉರುಳುವ ತೀವ್ರತೆಗೆ ಅಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಅಲ್ತಾಫ್ ಅವರು ರಸ್ತೆಗೆಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡಿದ್ದಾರೆ.
ತಕ್ಷಣ ಸ್ಥಳೀಯರು ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆಗೆ ಸ್ಪಂದಿಸದ ಅಲ್ತಾಫ್ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಬೈಕ್ ಸವಾರರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನೆಗೆ ಅಟೋ ರಿಕ್ಷಾ ಚಾಲಕನ ನಿರ್ಲಕ್ಯ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣ ಎಂದು ಹೇಳಲಾಗಿದೆ. ಆಫಘಾತದ ಸೀಸಿ ಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಟೋ ರಿಕ್ಷಾ ಪ್ರಯಾಣಿಕ ರಿಕ್ಷಾದಿಂದ ಹೊರಕ್ಕೆಸೆಯಲ್ಪಡುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಈ ಬಗ್ಗೆ ಸಜಿಪನಡು ನಿವಾಸಿ ಮುಹಮ್ಮದ್ ಹನೀಫ್ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment