ಪುತ್ತೂರು, ಸೆಪ್ಟೆಂಬರ್ 27, 2024 (ಕರಾವಳಿ ಟೈಮ್ಸ್) : ಕೋಟ್ಯಂತರ ರೂಪಾಯಿ ಬ್ಯಾಂಕ್ ಸಾಲದ ಮೊತ್ತ ಬಾಕಿಯಾಗಿರುವ ಬಗ್ಗೆ ವಿಚಾರಿಸಲು ಮನೆಗೆ ತೆರಳಿದ ಬ್ಯಾಂಕ್ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಸಿಬ್ಬಂದಿಗಳನ್ನು ಮನೆಯೊಳಗೆ ಕೂಡಿ ಹಾಕಿ ಪಿಸ್ತೂಲು ತೋರಿಸಿ ಜೀವಬೆದರಿಕೆ ಒಡ್ಡಿರುವ ಘಟನೆ ಬಲ್ನಾಡು ಗ್ರಾಮದ ಉಜಿರ್ ಪಾದೆ ಎಂಬಲ್ಲಿ ಬುಧವಾರ ನಡೆದಿದ್ದು, ಈ ಬಗ್ಗೆ ಗುರುವಾರ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಪುತ್ತೂರು ಎಸ್ ಬಿ ಐ ಬ್ಯಾಂಕ್ ಸಾರ್ವಜನಿಕ ಸಂಪರ್ಕಾಧಿಕಾರಿ, ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ನಿವಾಸಿ ಚೈತನ್ಯ ಎಚ್ ಸಿ (40) ಅವರು ಈ ಬಗ್ಗೆ ಪುತ್ತೂರು ಪೊಲೀಸರಿಗೆ ದೂರು ನೀಡಿದ್ದು, ಬ್ಯಾಂಕ್ ನಲ್ಲಿ ಪುತ್ತೂರು ತಾಲೂಕು, ಬಲ್ನಾಡು ಗ್ರಾಮದ ಉಜಿರ್ ಪಾದೆ ನಿವಾಸಿ ಶ್ರೀಮತಿ ಕೀರ್ತಿ ಅಖಿಲೇಶ್ ಎಂಬವರು 2 ಕೋಟಿ ರೂಪಾಯಿ ಸಾಲ ಮಾಡಿದ್ದು, ಸದ್ರಿ ಸಾಲ ಮರುಪಾವತಿ ಮಾಡದೇ NPA ಆಗಿರುತ್ತದೆ. ಸಾಲ ಬಾಕಿಯ ಬಗ್ಗೆ ಹಲವಾರು ಬಾರಿ ವಕೀಲರ ಮುಖಾಂತರ ಲೀಗಲ್ ನೋಟೀಸ್ ಮಾಡಿದರೂ, ತಿಳಿಸಿ ಹೇಳಿದ್ದರೂ ಸಾಲ ಮರುಪಾವತಿ ಮಾಡಿರುವುದಿಲ್ಲ.
ಈ ಬಗ್ಗೆ ಮೇಲಾಧಿಕಾರಿಗಳ ಮೌಖಿಕ ಆದೇಶದಂತೆ, ಸೆ 25 ರಂದು ಮಧ್ಯಾಹ್ನ, ಬ್ಯಾಂಕ್ ಸಾರ್ವಜನಿಕ ಸಂಪರ್ಕಾಧಿಕಾರಿ ಚೈತನ್ಯ ಹಾಗೂ ಸಹೋದ್ಯೋಗಿಗಳಾದ ಆಕಾಶ್ ಚಂದ್ರಬಾಬು ಮತ್ತು ಶ್ರೀಮತಿ ದಿವ್ಯಶ್ರೀ ಅವರೊಂದಿಗೆ ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಉಜಿರ್‌ಪಾದೆಯಲ್ಲಿರುವ ಶ್ರೀಮತಿ ಕೀರ್ತಿ ಅಖಿಲೇಶ್ ಅವರ ಮನೆಗೆ ಹೋದಾಗ ಮನೆಯಲ್ಲಿದ್ದ ಶ್ರೀಮತಿ ಅರುಣ್ ಕಿಶೋರ್ ರವರು ಮನೆಯೊಳಗೆ ಬರಮಾಡಿಕೊಂಡಿದ್ದಾರೆ. ಬಳಿಕ ಅಖಿಲೇಶ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿರುತ್ತಾರೆ. ಅಖಿಲೇಶ್ ಅವರು ಮನೆಗೆ ಬಂದು ಬ್ಯಾಂಕ್ ಸಿಬ್ಬಂದಿಗಳು ಮನೆಗೆ ಬಂದ ಬಗ್ಗೆ ತಕರಾರು ತೆಗೆದು ಗದರಿಸಿರುವುದಲ್ಲದೇ, ತಂದೆ ಬರುವ ತನಕ ಕೂರುವಂತೆ ಮನೆಯ ಬಾಗಿಲು ಹಾಕಿ ಬಲವಂತವಾಗಿ ಕೂರಿಸಿರುತ್ತಾರೆ. ಬಳಿಕ ಕೃಷ್ಣ ಕಿಶೋರ್ ಅವರು ಕೂಡಾ ಮನೆಗೆ ಬಂದು ಬ್ಯಾಂಕ್ ಸಿಬ್ಬಂದಿಗಳು ಮನೆಗೆ ಬಂದ ಬಗ್ಗೆ ತಕರಾರು ತೆಗೆದು, ಗದರಿಸಿ ಪಿಸ್ತೂಲ್ ತೋರಿಸಿ ಶೂಟ್ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 109/2024, ಕಲಂ 132, 127(2),351(2), r/w 3(5) ಬಿ.ಎನ್.ಎಸ್ ಮತ್ತು ಕಲಂ 27 ARMS Act ಪ್ರಕಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment