ಬಂಟ್ವಾಳ, ಸೆಪ್ಟೆಂಬರ್ 14, 2024 (ಕರಾವಳಿ ಟೈಮ್ಸ್) : ರಾಜ್ಯ ಸರಕಾರದ ನಿರ್ದೇಶನದನ್ವಯ ಬಂಟ್ವಾಳ ತಾಲೂಕಿನಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಾಳೆ (ಸೆಪ್ಟೆಂಬರ್ 15) ಫರಂಗಿಪೇಟೆಯಿಂದ ಮಿತ್ತೂರು-ಕಬಕದವರೆಗೆ ಮಾನವ ಸರಪಳಿ ರೂಪಿಸಲಾಗುತ್ತಿದ್ದು, ಬಂಟ್ವಾಳ ತಾಲೂಕಿನಲ್ಲಿ ಸುಮಾರು 20 ಸಾವಿರ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಹಶೀಲ್ದಾರ್ ಅರ್ಚನಾ ಭಟ್ ತಿಳಿಸಿದ್ದಾರೆ.
ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಬೆಳಿಗ್ಗೆ 9 ಗಂಟೆಗೆ ನಿಗದಿತ ಸ್ಥಳದಲ್ಲಿ ಹಾಜರಿರುವುದು, 9.30ಕ್ಕೆ ಸರತಿ ಸಾಲಿನಲ್ಲಿ ನಿಲ್ಲುವುದು, 9.37 ರಿಂದ ನಾಡಗೀತೆ ಹಾಡುವುದು, 9.55 ರಿಂದ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ನಡೆಯಲಿದೆ. 20 ಸಾವಿರ ಮಂದಿ ಭಾಗವಹಿಸುವ ದೊಡ್ಡ ಮಟ್ಟದ ಕಾರ್ಯಕ್ರಮ ಆಗಿರುವುದರಿಂದ ಟ್ರಾಫಿಕ್ ದಟ್ಟಣೆ ಉಂಟಾಗದಂತೆ ನಡೆದುಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು, ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕೊಡೆಗಳನ್ನು ತರುವುದು, ಹಿರಿಯ ನಾಗರಿಕರು ಹಾಗೂ ಸಣ್ಣ ಮಕ್ಕಳಿಗೆ ಅನುಕೂಲವಾಗುವಂತೆ ಕಾಲ್ನಡಿಗೆ ದೂರದಲ್ಲಿ ವಾಹನ ನಿಲ್ಲಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಕೂಲ ಮಾಡಿಕೊಡುವುದು ಇವೇ ಮೊದಲಾದ ಸೂಚನೆಗಳನ್ನು ಸಾರ್ವಜನಿಕರಿಗೆ ನೀಡಲಾಗಿದೆ.
ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕೋರಲಾಗಿದೆ. ಮಾನವ ಸರಪಳಿಯಲ್ಲಿ ಭಾಗವಹಿಸುವ ನಾಗರಿಕರು ತಮ್ಮ ಮಾಹಿತಿಯನ್ನು https://democracydaykarnataka.in/ ವೆಬ್ ಸೈಟಿಗೆ ಸಲ್ಲಿಸಬಹುದು. ಮಾಹಿತಿ ಅಪ್ಲೋಡ್ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಪ್ರಮಾಣ ಪತ್ರ ಡೌನ್ ಲೋಡ್ ಮಾಡಿಕೊಳ್ಳಬಹುದು.
ಈ ಬಗ್ಗೆ ಹೆಚ್ಚಿನ ಮಾಹಿತಿಗೆ ನೋಡಲ್ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ವಿಟ್ಲ ಪಟ್ಟಣ ಪಂಚಾಯತ್ ಹಾಗೂ ಬಂಟ್ವಾಳ ಪುರಸಭಾ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು ಎಂದು ತಹಶೀಲ್ದಾರ್ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment