ಬಂಟ್ವಾಳ, ಸೆಪ್ಟೆಂಬರ್ 21, 2024 (ಕರಾವಳಿ ಟೈಮ್ಸ್) : ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ನಂದರಬೆಟ್ಟು ಎಂಬಲ್ಲಿ 2 ವರ್ಷಗಳ ಹಿಂದೆ ನಡೆದ ಸಹೋದರನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಹೋದರನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ನೀಡಿದೆ.
2022 ರ ಮೇ 10 ರಂದು ಬಾಳಪ್ಪ ನಾಯ್ಕ ಮತ್ತು ಅವರ ಸಹೋದರ ಐತ್ತಪ್ಪ ನಾಯ್ಕ ಅವರುಗಳ ಮಧ್ಯೆ ಮಾತಿನ ಚಕಮಕಿ ನಡೆದು, ಐತ್ತಪ್ಪ ನಾಯ್ಕನು ತನ್ನ ಸಹೋದರ ಬಾಳಪ್ಪ ನಾಯ್ಕನನ್ನು ತಲೆಗೆ ಹಾಗೂ ಇತರ ಭಾಗಗಳಿಗೆ ಮರದ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ. ಘಟನೆಗೆ ಸಂಬಂಧಿಸಿದಂತೆ, ವಿಟ್ಲ ಪೊಲೀಸ್ ಠಾಣೆಯಲ್ಲಿ 2022 ರ ಮೇ 11 ರಂದು ಅಪರಾಧ ಕ್ರಮಾಂಕ 73/2022 ಕಲಂ 302 ರಂತೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖಾಧಿಕಾರಿ ವಿಟ್ಲ ಪೊಲೀಸ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಎಚ್ ಇ ಅವರು ಸೂಕ್ತ ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಬಗ್ಗೆ ಶುಕ್ರವಾರ (ಸೆ 20) ಮಂಗಳೂರು 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸುನೀತಾ ಎಸ್ ಜಿ ಅವರು ಸದ್ರಿ ಪ್ರಕರಣದ ಆರೋಪಿ ಐತ್ತಪ್ಪ ನಾಯ್ಕ ಅವರಿಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ಅವರು ವಾದ ಮಂಡಿಸಿದ್ದು, ಪ್ರಕರಣದ ತನಿಖಾ ಸಹಾಯಕರಾಗಿ ಎಚ್ ಸಿ ಜಯರಾಮ್ ಅವರು, ನ್ಯಾಯಾಲಯ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಪಿ ಸಿ ಮಂಜುನಾಥ ಹಾಗೂ ಕೋರ್ಟ್ ಮಾನಿಟರಿಂಗ್ ಅಧಿಕಾರಿ ಮತ್ತು ಸಿಬ್ಬಂದಿಗಳು ಆರೋಪಿಗೆ ಶಿಕ್ಷೆಯಾಗುವ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಜಿಲ್ಲಾ ಎಸ್ಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
0 comments:
Post a Comment