ಬಂಟ್ವಾಳ, ನವೆಂಬರ್ 26, 2024 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ದೇಶದ ಸಂವಿಧಾನ ದಿನಾಚರಣೆಯನ್ನು ಮಂಗಳವಾರ ಆಚರಿಸಲಾಯಿತು.
ಶಾಲಾ ಕನ್ನಡ ಭಾಷಾ ಅಧ್ಯಾಪಕ ಧನರಾಜ್ ದೊಡ್ಡನೇರಳೆ ಅವರು ಸಂವಿಧಾನದ ರಚನೆ, ಸಂವಿಧಾನದ ಮಹತ್ವ, ಸಂವಿಧಾನದಲ್ಲಿ ಅಡಕವಾಗಿರುವ ವಿಧಿಗಳು, ಅನುಚ್ಛೇದಗಳು ಮತ್ತು ಭಾಗಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಬಳಿಕ ಮಾತನಾಡಿದ ಅವರು, ನಮ್ಮ ದೇಶದ ಸಂವಿಧಾನ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ “ಮೆದುಳಿನ ಕೂಸು”. ಪ್ರಪಂಚದ 9 ಭಾಷೆಗಳಲ್ಲಿ ಆಳವಾದ ಪಾಂಡಿತ್ಯ ಮತ್ತು 64 ವಿವಿಧ ವಿಷಯಗಳಲ್ಲಿ ಅಪಾರವಾದ ಜ್ಞಾನ ಪಡೆದ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಂವಿಧಾನ ರಚನೆ ಮಾಡುವುದು ಅಷ್ಟೇನೂ ಕಷ್ಟಕರವಾಗಿರಲಿಲ್ಲ. ಆದರೆ ಅದರ ಮೇಲಿನ ಚರ್ಚೆ ಮತ್ತು ತಿದ್ದುಪಡಿಗಳ ಮೇಲಿನ ವಿಚಾರದಲ್ಲಿ ಎರಡು ವರ್ಷ, 11 ತಿಂಗಳು, 18 ದಿನಗಳ ಕಾಲ ಸಂವಿದಾನವನ್ನು ಸಮರ್ಪಿಸಲು ಸಮಯಾವಕಾಶ ಬೇಕಾಯಿತು. ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರು ಆ ಸಮಿತಿಯ ಏಳು ಜನ ಸದಸ್ಯರನ್ನೊಳಗೊಂಡಂತೆ 1949 ಡಿಸೆಂಬರ್ 9 ರಲ್ಲಿ ಕರಡು ರಚನಾ ಸಮಿತಿಯ ಕೆಲಸವನ್ನು ಆರಂಬಿಸಿದರು. ಆ ಸಮಿತಿಯ ಉಳಿದ 7 ಜನ ಸದಸ್ಯರೆಂದರೆ ಪಿ ಮಾಧವರಾವ್, ಎನ್ ಗೋಪಾಲಸ್ವಾಮಿ, ಟಿ ಟಿ ಕೃಷ್ಣಮಚಾರಿ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಡಾ ಕೆ ಎಂ ಮುನ್ಷಿ, ಸೈಯದ್ ಮಹಮ್ಮದ್ ಸಾದುಲ್ಲ, ಬಿ ಎನ್ ರಾವ್ ಇವರನ್ನು ಒಳಗೊಂಡಿದ್ದರೂ ಎಲ್ಲಾ ಸದಸ್ಯರು ಬೇರೆ ಬೇರೆ ಕಾರಣಗಳಿಂದ ಸಂವಿಧಾನ ಕರಡು ರಚನಾ ಸಮಿತಿಯ ಕೆಲಸದಿಂದ ದೂರ ಉಳಿಯುತ್ತಾರೆ. ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರೊಬ್ಬರೇ ದಿನದಲ್ಲಿ 18 ಗಂಟೆಗಳ ಕಾಲ ಸಂವಿಧಾನ ರಚನಾ ಕರುಡು ಕೆಲಸವನ್ನು ಮಾಡಿ 1949 ನವೆಂಬರ್ 26ರಂದು ಭಾರತದ ಪ್ರಧಾನ ಮಂತ್ರಿಗಳಾಗಿದ್ದ ಪಂಡಿತ್ ಜವಾಹರಲಾಲ್ ನೆಹರು ಮತ್ತು ಪ್ರಥಮ ರಾಷ್ಟ್ರಪತಿಗಳಾಗಿದ್ದ ಡಾ ರಾಜೇಂದ್ರ ಪ್ರಸಾದ್ ಅವರಿಗೆ ಹಸ್ತಾಂತರಿಸಿದ್ದರು ಎಂದರು. ಬಳಿಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸಂವಿಧಾನ ರಕ್ಷಣಾ ಪ್ರತಿಜ್ಞಾ ವಿಧಿ ಸ್ವೀಕಾರ ಬೋಧಿಸಲಾಯಿತು.
ವಿದ್ಯಾರ್ಥಿಗಳು ಪ್ರಾರ್ಥನೆ ಮತ್ತು ಸಂವಿಧಾನ ಪೀಠಿಕೆ ವಾಚಿಸಿದರು. ಶಾಲಾ ಮುಖ್ಯ ಶಿಕ್ಷಕ ಶಿವಪ್ಪ ನಾಯ್ಕ ಎನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕಿ ಶ್ರೀಮತಿ ಸುಧಾ ನಾಗೇಶ್, ಶಾಲಾ ನಾಯಕ ಮನ್ವಿತ್ ಸಿ ಪೂಜಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಅಬ್ದುಲ್ ರಾಝಿಕ್ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ತೇಜಸ್ವಿನಿ ವಂದಿಸಿದರು. ಶಿಕ್ಷಕ ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment