ಬಂಟ್ವಾಳ, ಮಾರ್ಚ್ 17, 2025 (ಕರಾವಳಿ ಟೈಮ್ಸ್) : ಪಾಣೆಮಂಗಳೂರಿನಲ್ಲಿ ಮಾರ್ಚ್ 7 ರಂದು ತಡರಾತ್ರಿ ವೇಳೆ ರಸ್ತೆ ಬ್ಯಾರಿಯರಿಗೆ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಿ ಸಿ ರೋಡಿನ ಯುವ ನ್ಯಾಯವಾದಿಯೋರ್ವರು ಬ್ರೈನ್ ಡೆಡ್ ಆಗಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ವೇಳೆಗೆ ಮೃತಪಟ್ಟಿದ್ದಾರೆ.
ಮೃತ ಯುವ ವಕೀಲರನ್ನು ಬಿ ಸಿ ರೋಡು ನಿವಾಸಿ ಪ್ರಥಮ್ (27) ಎಂದು ಹೆಸರಿಸಲಾಗಿದೆ. ಇವರು ಮಾರ್ಚ್ 7 ರಂದು ರಾತ್ರಿ ಸುಮಾರು 11.55ರ ವೇಳೆಗೆ ತನ್ನ ಬೈಕಿನಲ್ಲಿ ಮನೆಯಿಂದ ಅಂದರೆ ಬಿ ಸಿ ರೋಡ್ ಕಡೆಯಿಂದ ಮೆಲ್ಕಾರ್ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿರುವ ವೇಳೆ ಪಾಣೆಮಂಗಳೂರಿನ ಕೆ ಎನ್ ಆರ್ ಪ್ಲಾಂಟ್ ಬಳಿ ರಸ್ತೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಆಕಸ್ಮಿಕವಾಗಿ ರಸ್ತೆ ಬ್ಯಾರಿಯರ್ ವೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಮೋಟಾರ್ ಸೈಕಲ್ ಸಮೇತ ಪ್ರಥಮ್ ಕಾಂಕ್ರೀಟ್ ರಸ್ತೆಗೆ ಬಿದ್ದು ತಲೆಗೆ, ಮುಖಕ್ಕೆ, ಕೈ-ಕಾಲುಗಳಿಗೆ ಗಾಯಗಳಾಗಿತ್ತು. ತಕ್ಷಣ ಸ್ಥಳೀಯರು ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದರು. ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮೇಲ್ದರ್ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಂಗಳೂರು ಎ ಜೆ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಬ್ರೈನ್ ಡೆಡ್ ಆದ ಪರಿಣಾಮ ಚಿಕಿತ್ಸೆಗೆ ಸ್ಪಂದಿಸದ ಅವರು ಭಾನುವಾರ ಮಧ್ಯ ರಾತ್ರಿ ವೇಳೆಗೆ ಮೃತಪಟ್ಟಿದ್ದಾರೆ.
ಮೃತರ ಎರಡು ಕಣ್ಣುಗಳು, ಎರಡು ಕಿಡ್ನಿಗಳು, ಲಿವರ್ ಮತ್ತು ಕರುಳಿನ ಭಾಗವನ್ನು ದಾನವಾಗಿ ನೀಡಿ ಮೃತರ ತಂದೆ ಮತ್ತು ಸಹೋದರ ಸಾವಿನ ದುಃಖದ ನಡುವೆಯೂ ಮಾನವೀಯತೆ ಮೆರೆದಿದ್ದಾರೆ.
ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆದ ಪ್ರಥಮ್ ಅವರು ಬಿ ಸಿ ರೋಡಿನ ವಕೀಲ ಕೆ ವೆಂಕಟ್ರಮಣ ಶೆಣೈ ಅವರ ಬಳಿ ವಕೀಲ ವೃತ್ತಿಯನ್ನು ಅಭ್ಯಾಸ ಮಾಡುತ್ತಿದ್ದರು. ಇವರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಚುರುಕಾಗಿದ್ದು, ಉತ್ತಮ ನೃತ್ಯ ಪಟುವೂ ಆಗಿದ್ದರು. ಕಳೆದ ನವೆಂಬರ್ ತಿಂಗಳಿನಲ್ಲಷ್ಟೆ ಇವರ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಮೃತರು ತಂದೆ ಮತ್ತು ಸಹೋದರನನ್ನು ಅಗಲಿದ್ದಾರೆ.
ಈ ಬಗ್ಗೆ ಮೃತರ ಸಹೋದರ ಪ್ರೀತಂ ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment