ಬಂಟ್ವಾಳ, ಎಪ್ರಿಲ್ 28, 2025 (ಕರಾವಳಿ ಟೈಮ್ಸ್) : ಅಂಗನವಾಡಿ ಸಹಾಯಕಿ ಮಹಿಳೆ ತನ್ನ ಜಾಗದಲ್ಲಿ ಮನೆ ನವೀಕರಿಸುತ್ತಿದ್ದ ವೇಳೆ ನೆರೆಕರೆಯ ಮೂರು ಮಂದಿಯ ತಂಡವೊಂದು ಮನೆಗೆ ಬಂದು ಜೀವಬೆದರಿಕೆ ಹಾಕಿರುವ ಘಟನೆ ಕುಕ್ಕಿಪ್ಪಾಡಿ ಗ್ರಾಮದ ಎಣ್ಣೂರುಪದವು ಎಂಬಲ್ಲಿ ಭಾನುವಾರ ಸಂಭವಿಸಿದೆ.
ಇಲ್ಲಿನ ನಿವಾಸಿ ಶ್ರೀಮತಿ ರತ್ನಾ (46) ಅವರು ತನ್ನ ಗಂಡ ಹೊನ್ನಪ್ಪ ಪೂಜಾರಿ ಮತ್ತು ಮಕ್ಕಳಾದ ರಾಹುಲ್ ಮತ್ತು ರಶ್ಮಿಯೊಂದಿಗೆ ವಾಸವಾಗಿದ್ದು, ಎಣ್ಣೂರು ಪದವು ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿರುತ್ತಾರೆ. ಬಂಟ್ವಾಳ ತಾಲೂಕು ಕುಕ್ಕಿಪಾಡಿ ಗ್ರಾಮದ ಎಣ್ಣೂರು ಪದವು ಎಂಬಲ್ಲಿ ಅವರ ಗಂಡನ ಹೆಸರಿನಲ್ಲಿರುವ ಸರ್ವೆನಂಬ್ರ 95/2ಪಿ1 ರ 00.2.50 ಸೆಂಟ್ಸ್ ಜಾಗವು 94ಸಿ ಮೂಲಕ ಪಹಣಿಪತ್ರ ಆಗಿದ್ದು, ಸದ್ರಿ ಜಾಗದಲ್ಲಿದ್ದ ಹಳೆಯ ಮನೆಯನ್ನು ನವೀಕರಿಸುವ ಕೆಲಸ ಮಾಡುತ್ತಿರುವ ವೇಳೆ ನೆರೆಕರೆಯ ಆರೋಪಿತರಾದ ಗುರುಪ್ರಸಾದ್, ರಾಜೇಶ್ ಮತ್ತು ಯುವರಾಜ್ ಎಂಬವರು ಭಾನುವಾರ ರತ್ನಾ ಅವರ ಜಾಗದ ಬಳಿ ಇರುವ ಸರಕಾರಿ ಜಾಗದ ವಿಚಾರದಲ್ಲಿ ಮನೆಗೆ ಬಂದು ಜಗಳ ಮಾಡಿ ನಿನ್ನ ಅಂಗನವಾಡಿ ಕೆಲಸದಿಂದ ತೆಗೆಯುದಾಗಿ ಹಾಗೂ ಕೊಲ್ಲದೇ ಬಿಡುವುದಿಲ್ಲ, ನಿನ್ನನ್ನು ಸಾಯಿಸಿ ನಂತರ ನಿನ್ನ ಗಂಡನನ್ನು ಸಾಯಿಸುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ. ನಂತರ ಸದ್ರಿ ಜಾಗದ ವಿಚಾರದಲ್ಲಿ ಭಾನುವಾರ ಅಪರಾಹ್ನ 3 ಗಂಟೆಗೆ ಆರೋಪಿ ಯುವರಾಜ್ ಎಂಬಾತ ರತ್ನಾ ಅವರ ಮನೆಯ ಸಿಟೌಟ್ ಸಮೀಪ ಬಂದು ತಲೆಗೆ ಕೆಂಪು ಕಲ್ಲನ್ನು ಬಿಸಾಕಿದ ಪರಿಣಾಮ ಅವರ ಬಲಭಾಗ ಕಣ್ಣಿನ ಸಮೀಪ ಹಾಗೂ ಬಲಗೈ ಭುಜಕ್ಕೆ ಗಾಯವಾಗಿರುತ್ತದೆ. ಗಾಯಾಳು ರತ್ನಾ ಅವರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment