ಮಂಗಳೂರು, ಮೇ 23, 2025 (ಕರಾವಳಿ ಟೈಮ್ಸ್) : ದಾಂಪತ್ಯ ಜೀವನದಲ್ಲಿ ಬಿರುಕು ಬಂದ ಕಾರಣಕ್ಕೆ ಕೋಪಗೊಂಡ ವ್ಯಕ್ತಿ ಮದುವೆಗೆ ವಧು ತೋರಿಸಿದ ಬ್ರೋಕರ್ ವ್ಯಕ್ತಿಯನ್ನು ಚೂರಿಯಿಂದ ಇರಿದು ಕೊಂದ ಘಟನೆ ವಳಚ್ಚಿಲ್ ಪದವು ಎಂಬಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ವಾಮಂಜೂರು ನಿವಾಸಿ, ಮದುವೆ ಬ್ರೋಕರ್ ವೃತ್ತಿಯ ಸುಲೈಮಾನ್ (50) ಎಂದು ಹೆಸರಿಸಲಾಗಿದೆ. ಆರೋಪಿಯನ್ನು ವಳಚ್ಚಿಲ್ ಪದವು ನಿವಾಸಿ ಮುಸ್ತಫಾ (30) ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮೃತ ಸುಲೈಮಾನ್ ಅವರ ಪುತ್ರ ರಿಯಾಝ್ ಪೊಲೀಸರಿಗೆ ದೂರು ನೀಡಿದ್ದು, ಸುಲೈಮಾನ್ ಅವರು ಮದುವೆ ಬ್ರೋಕರ್ ಕೆಲಸ ಮಾಡಿಕೊಂಡಿದ್ದು, ಸುಮಾರು 8 ತಿಂಗಳ ಹಿಂದೆ ಅಡ್ಡೂರಿನ ಶೈನಾಜ್ ಎಂಬಾಕೆಯನ್ನು ಕೊಲೆ ಆರೋಪಿ ವಳಚ್ಚಿಲ್ ಪದವಿನ ಮುಸ್ತಪಾ ಎಂಬವನೊಂದಿಗೆ ಮದುವೆ ಮಾಡಿಸುವ ಬಗ್ಗೆ ಮಾತುಕತೆ ನಡೆಸಿದ್ದು, ಬಳಿಕ ಎರಡೂ ಕಡೆಯವರ ಮನೆಯವರು ಒಪ್ಪಿಕೊಂಡು 8 ತಿಂಗಳ ಹಿಂದೆ ಆರೋಪಿ ಮುಸ್ತಫಾನಿಗೆ ಅಡ್ಡೂರಿನ ಶೈನಾಜ್ ಎಂಬವಳೊಂದಿಗೆ ವಿವಾಹವಾಗಿತ್ತು. ನಂತರ ಶೈನಾಜ್ ಹಾಗೂ ಮುಸ್ತಫಾ ಅವರ ಮಧ್ಯೆ ದಾಂಪತ್ಯ ಜೀವನದಲ್ಲಿ ಮನಸ್ತಾಪ ಉಂಟಾಗಿ ಸುಮಾರು 2 ತಿಂಗಳ ಹಿಂದೆ ಶೈನಾಜ್ ತನ್ನ ತವರು ಮನೆಗೆ ಹೋಗಿದ್ದಳು. ಇದರಿಂದ ಮುಸ್ತಪಾ ತನ್ನ ಮದುವೆ ಮಾಡಿಸಿದ್ದ ಸುಲೈಮಾನ್ ಅವರೊಂದಿಗೆ ದ್ವೇಷದಿಂದಿದ್ದ.
ಗುರುವಾರ (ಮೇ 22) ರಾತ್ರಿ ಸುಮಾರು 9 ಗಂಟೆ ವೇಳೆಗೆ ಮುಸ್ತಫಾ, ಸುಲೈಮಾನ್ ಅವರಿಗೆ ಮೊಬೈಲ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ಇದರಿಂದ ಸುಲೈಮಾನ್ ಅವರು ಆತನೊಂದಿಗೆ ಮಾತನಾಡುವ ಸಲುವಾಗಿ ವಳಚ್ಚಿಲ್ ಪದವಿನಲ್ಲಿರುವ ಮುಸ್ತಪಾನ ಮನೆಗೆಂದು ಬಂದಿದ್ದಾರೆ. ಬರುವಾಗ ಜೊತೆಯಲ್ಲಿ ಮಕ್ಕಳನ್ನು ಕೂಡಾ ಕರೆದುಕೊಂಡು ಬಂದಿದ್ದರು. ವಳಚ್ಚಿಲ್ ಪದವು ತಲುಪಿದ ಬಳಿಕ ಸುಲೈಮಾನ್ ಅವರು ಮುಸ್ತಪಾನೊಂದಿಗೆ ಮಾತಾಡಿ ಬರುವುದಾಗಿ ಹೇಳಿ ಆತನ ಮನೆಗೆ ಹೋಗಿದ್ದಾರೆ. ಮಕ್ಕಳು ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದರು. ಮನೆಗೆ ಹೋಗಿದ್ದ ಸುಲೈಮಾನ್ ಸ್ವಲ್ಪ ಹೊತ್ತಿನ ನಂತರ ವಾಪಾಸು ರಸ್ತೆ ಬದಿಗೆ ಬಂದು, ಮಕ್ಕಳೊಂದಿಗೆ ಮುಸ್ತಪಾನೊಂದಿಗೆ ಮಾತಾಡುವುದು ವೇಸ್ಟ್ ಎಂದು ಹೇಳಿ ಅಲ್ಲಿಂದ ಹೊರಡುವಷ್ಟರಲ್ಲಿ ಮುಸ್ತಫಾ ಮನೆ ಕಡೆಯಿಂದ ಓಡಿ ಬಂದು ಸುಲೈಮಾನ್ ಅವರನ್ನು ಬ್ಯಾರಿ ಭಾಷೆಯಲ್ಲಿ ಅವಾಚ್ಯವಾಗಿ ಬೈದು ಬೊಬ್ಬೆ ಹಾಕುತ್ತಾ ಆತನ ಕೈಯ್ಯಲ್ಲಿದ್ದ ಚೂರಿಯಿಂದ ಸುಲೈಮಾನ್ ಅವರ ಕುತ್ತಿಗೆಯ ಬಲಬದಿ, ಹಿಂಬದಿಗೆ ತಿವಿದಿದ್ದಾನೆ. ಇದರಿಂದ ಸುಲೈಮಾನ್ ಅವರು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಬಳಿಕ ಆರೋಪಿಯು ಅವರ ಮಕ್ಕಳನ್ನುದ್ದೇಶಿಸಿ ನಿಮ್ಮನ್ನು ಒಬ್ಬರನ್ನೂ ಜೀವಂತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಮಕ್ಕಳಾದ ಜಿಯಾದ್ ಯಾನೆ ಶಿಯಾಬ್ ಹಾಗೂ ರಿಯಾಬ್ ಎಂಬವರಿಗೂ ತಿವಿದಿದು ಕೊಲೆಗೆ ಯತ್ನಿಸಿದ್ದಾನೆ. ಈ ಸಂದರ್ಭ ಅವರ ಸಂಬಂಧಿ ಇಸಾಸ್ಕ ಅಲ್ಲಿಂದ ಓಡಿದ್ದು ಆತನನ್ನೂ ಆರೋಪಿ ಬೆನ್ನಟ್ಟಿದ್ದಾನೆ.
ಚೂರಿ ಇರಿತದಿಂದ ಗಾಯಗೊಂಡವರನ್ನು ಸ್ಥಳೀಯರು ರಾತ್ರಿ 11 ಗಂಟೆ ವೇಳೆಗೆ ಪಡೀಲಿನ ಜನಪ್ರಿಯ ಆಸ್ಪತ್ರೆಗೆ ಸಾಗಿಸಿದ್ದು, ಗಂಭೀರ ಗಾಯಗೊಂಡಿದ್ದ ಸುಲೈಮಾನ್ ಅದಾಗಲೇ ಮೃತಪಟ್ಟಿದ್ದಾರೆ. ಗಾಯಾಳುಗಳಾದ ಜಿಯಾದ್ ಯಾನೆ ಶಿಯಾಬ್ ಹಾಗೂ ರಿಯಾಬ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment