ಬಂಟ್ವಾಳ, ಮೇ 22, 2025 (ಕರಾವಳಿ ಟೈಮ್ಸ್) : ಮನೆ ಮಂದಿ ಮದುವೆಗೆ ತೆರಳಿದ್ದ ವೇಳೆ ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ತುಂಬೆ ಗ್ರಾಮದ ಹಾಮದ್ ಹಾಜಿ ರಸ್ತೆಯ ಪೆರ್ಲಬೈಲು ಎಂಬಲ್ಲಿ ಮೇ 19 ರಂದು ಸೋಮವಾರ ಅಪರಾಹ್ನ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ ಅಬ್ದುಲ್ ಮಜೀದ್ ಎಂಬವರ ಪತ್ನಿ ರುಕ್ಸಾನಾ (38) ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಇವರು ತನ್ನ ತವರು ಮನೆಯವರೊಂದಿಗೆ ಸೋಮವಾರ ಬೆಳಿಗ್ಗೆ ಮನೆಗೆ ಬೀಗ ಹಾಕಿ ತೊಕ್ಕೊಟ್ಟುವಿನಲ್ಲಿ ನಡೆದ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಅಪರಾಹ್ನ 2 ಗಂಟೆ ವೇಳೆಗೆ ಮನೆಗೆ ವಾಪಾಸು ಬಂದಾಗ ಈ ಕಳವು ಕೃತ್ಯ ಬೆಳಕಿಗೆ ಬಂದಿದೆ.
ಮನೆಗೆ ಬಂದು ನೋಡಿದಾಗ ಮನೆಯೊಳಗೆ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದುದ್ದನ್ನು ಗಮನಿಸಿ ಕಪಾಟಿನ ಬಳಿ ಹೋಗಿ ನೋಡಲಾಗಿ ಕಪಾಟಿನ ಬಾಗಿಲು ತೆರೆದಿರುವುದು ಕಂಡು ಬಂದಿದೆ. ಕಪಾಟಿನೊಳಗಿದ್ದ ಚಿನ್ನದ ನೆಕ್ಲೇಸ್ ಇಟ್ಟಿದ್ದ ಬಾಕ್ಸನ್ನು ತೆರೆದು ನೋಡಿದಾಗ ಅದರಲ್ಲಿಟ್ಟಿದ್ದ ಸುಮಾರು 28 ಗ್ರಾಂ ತೂಕದ 1.49 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ನೆಕ್ಲೇಸ್ ಕಳುವಾಗಿರುವುದು ಗೊತ್ತಾಗಿದೆ. ಕಳ್ಳರು ಮನೆಯ ಮಾಡಿನ ಹಂಚನ್ನು ಸರಿಸಿ ಮನೆಯೊಳಗೆ ಪ್ರವೇಶಿಸಿ ಕಪಾಟಿನಲ್ಲಿದ್ದ ಚಿನ್ನವನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
0 comments:
Post a Comment