ಬಂಟ್ವಾಳ, ಜೂನ್ 30, 2025 (ಕರಾವಳಿ ಟೈಮ್ಸ್) : ಇಲ್ಲಿನ ಮಿನಿವಿಧಾನ ಸೌಧ ಕಟ್ಟಡದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ರೆಕಾರ್ಡ್ ರೂಂ ಅಧಿಕಾರಿ ಸಾರ್ವಜನಿಕರೊಂದಿಗೆ ತೀವ್ರ ಉಡಾಫೆ ವರ್ತನೆ ತೋರುತ್ತಿರುವ ಬಗ್ಗೆ ಸಾರ್ವಜನಿಕರು ತೀವ್ರ ಗರಂ ಆಗಿದ್ದು, ಸೋಮವಾರ ಕಚೇರಿಯಲ್ಲೇ ತರಾಟೆಗೆಳೆದ ಘಟನೆ ವರದಿಯಾಗಿದೆ.
ಸಾರ್ವಜನಿಕರು ತಮ್ಮ ಜಮೀನುಗಳಿಗೆ ಸಂಬಂಧಿಸಿದಂತೆ ದಾಖಲೆಗಳ ಯಥಾ ಪ್ರತಿಗಳನ್ನು ನೀಡುವಂತೆ ಕಚೇರಿಗೆ ಅರ್ಜಿ ಸಲ್ಲಿಸಿದರೆ ತಿಂಗಳುಗಟ್ಟಲೆ ಯಥಾ ಪ್ರತಿ ನೀಡದೆ ಸತಾಯಿಸುತ್ತಿರುವುದಲ್ಲದೆ ಈ ಬಗ್ಗೆ ಪ್ರಶ್ನಿಸಿದರೆ ಇಲ್ಲಿನ ಅಧಿಕಾರಿ ಶ್ರೀನಿಧಿ ಎಂಬವರು ಸಾರ್ವಜನಿಕರಿಗೆ ಉಡಾಫೆ ಹಾಗೂ ಬೇಜವಾಬ್ದಾರಿ ವರ್ತನೆ ತೋರುತ್ತಿದ್ದಾರೆ ಎಂದು ಸೋಮವಾರ ಕಚೇರಿ ಮುಂದೆ ಜಮಾಯಿಸಿದ ಸಾರ್ವಜನಿಕರು ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಒಂದೆರಡು ದಿನಗಳಲ್ಲೇ ದೊರೆಯುತ್ತಿದ್ದ ದಾಖಲೆಗಳನ್ನು ನೀಡಲು ತಿಂಗಳುಗಟ್ಟಲೆ ಸತಾಯಿಸುತ್ತಿರುವುದಲ್ಲದೆ ತಾಸುಗಟ್ಟಲೆ ಜನರನ್ನುನಿಲ್ಲಿಸಿ ಕೊನೆ ಗಳಿಗೆಯಲ್ಲಿ ವಾಪಾಸು ಕಳಿಸುತ್ತಿರುವುದಲ್ಲದೆ ಜನರೊಂದಿಗೆ ಮಾನವೀಯತೆಯೇ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿರುವ ಸಾರ್ವಜನಿಕರು ಈ ಅಧಿಕಾರಿ ಈ ಹಿಂದೆಯೂ ಇಂತಹದೇ ವರ್ತನೆಗಾಗಿ ಇಲ್ಲಿಂದ ಎತ್ತಂಗಡಿಯಾಗಿ ತೆರಳಿದ್ದು, ಇದೀಗ ಮತ್ತೆ ಇದೇ ಕಚೇರಿಗೆ ಬಂದಿದ್ದಾರೆ ಎಂದು ಆರೋಪಿಸಿದ್ದಾರೆ.
0 comments:
Post a Comment