ಬಂಟ್ವಾಳ, ಜೂನ್ 28, 2025 (ಕರಾವಳಿ ಟೈಮ್ಸ್) : ಅಟೋ ರಿಕ್ಷಾ ಮಾರಾಟ ಮಾಡಿದ ಬಗ್ಗೆ ಹಣ ಕೇಳಿದ್ದಕ್ಕೆ ವ್ಯಕ್ತಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಪುದು ಗ್ರಾಮದ ಫರಂಗಿಪೇಟೆ ಎಂಬಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.
ಹಲ್ಲೆಗೊಳಗಾದವರನ್ನು ಫರಂಗಿಪೇಟೆ ನಿವಾಸಿ ಅಜರುದ್ದೀನ್ (38) ಎಂದು ಹೆಸರಿಸಲಾಗಿದ್ದು, ಆರೋಪಿಗಳನ್ನು ಅಶ್ರಫ್ ಅಲಿ, ಕಲೀಲ್ ಹಾಗೂ ಇತರ ಇಬ್ಬರು ಎಂದು ಹೇಳಲಾಗಿದೆ. ಈ ಬಗ್ಗೆ ಅಜರುದ್ದೀನ್ ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ಅಶ್ರಫ್ ಆಲಿ ಎಂಬವರಿಗೆ ಒಂದು ತಿಂಗಳ ಹಿಂದೆ ಇವರ ಭಾವ ನಾಸೀರ್ ಹುಸೈನ್ ಎಂಬವರ ಆಟೋ ರಿಕ್ಷಾವನ್ನು ಮಾರಾಟ ಮಾಡಿದ್ದು, ಸದ್ರಿ ಆಟೋ ರಿಕ್ಷಾದ ಹಣವನ್ನು ನಾಸೀರ್ ಹುಸೈನ್ ಅವರಿಗೆ ಕೆಲವು ದಿನಗಳ ಹಿಂದೆ ನೀಡುವಂತೆ ತಿಳಿಸಿದ್ದರು.
ಹೀಗಿರುತ್ತಾ ಜೂನ್ 26 ರಂದು ರಾತ್ರಿ ಅಶ್ರಫ್ ಆಲಿ, ಕಲೀಲ್ ಹಾಗೂ ಇತರ ಇಬ್ಬರೊಂದಿಗೆ ಆಟೋ ರಿಕ್ಷಾದಲ್ಲಿ ಹಾಗೂ ಕಾರಿನಲ್ಲಿ ಅಜರುದ್ದೀನ್ ಅವರ ಮನೆಗೆ ಬಂದು ಅಜರುದ್ದೀನ್ ಅವರನ್ನು ಕರೆದು ನಿನಗೆ ಆಟೋ ರಿಕ್ಷಾದ ದುಡ್ಡು ಬೇಕಾ ಎಂದು ಅವಾಚ್ಯವಾಗಿ ಬೈದು ಅಶ್ರಫ್ ಆಲಿ ಕೈಯಿಂದ ಎದೆಗೆ, ಮುಖಕ್ಕೆ ಹೊಡೆದಿದ್ದು, ಅವನ ಜೊತೆ ಬಂದ ಕಲೀಲ್ ಎಂಬವವನು ಕಲ್ಲಿನಿಂದ ತಲೆಗೆ, ಮುಖಕ್ಕೆ ಹಣೆಗೆ ಹೊಡೆದಿದ್ದಾನೆ. ಜೊತೆಗೆ ಬಂದಿದ್ದ ಇತರ ಇಬ್ಬರು ಕೂಡಾ ಅವರೊಟ್ಟಿಗೆ ಸೇರಿ ಕೈಯಿಂದ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂದರ್ಭ ಅಜರುದ್ದೀನ್ ಬೊಬ್ಬೆ ಹಾಕಿದ್ದು, ಬೊಬ್ಬೆ ಕೇಳಿ ನೆರೆಮನೆಯವರು ಬರುವುದನ್ನು ನೋಡಿ ಆರೋಪಿಗಳು ತಾವು ಬಂದಿದ್ದ ಆಟೋ ರಿಕ್ಷಾ ಹಾಗೂ ಕಾರಿನಲ್ಲಿ ಹೊಗಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ಅಜರುದ್ದೀನ್ ತುಂಬೆ ಫಾಧರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಅಜರುದ್ದೀನ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 90/2025 ಕಲಂ 352, 115(2), 118(1), ಜೊತೆಗೆ 3 (5) ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದೆ.
0 comments:
Post a Comment