ದಕ್ಷಿಣ ಕನ್ನಡದಲ್ಲಿ ದಶಕಗಳಿಂದ ಸೌಹಾರ್ದತೆ ಮತ್ತು ಮಾನವೀಯತೆ ಕುಂದುತ್ತಿರುವ ಬಗ್ಗೆ ನಾಯಕರ ಕಳವಳ
ಬೆಂಗಳೂರು, ಜೂನ್ 28, 2025 (ಕರಾವಳಿ ಟೈಮ್ಸ್) : ಪಿಯುಸಿಎಲ್ ಕರ್ನಾಟಕ, ಐಲಾಜ್ ಕರ್ನಾಟಕ ಹಾಗೂ ಎಪಿಸಿಆರ್ ಕರ್ನಾಟಕ ಇವುಗಳು ಜಂಟಿಯಾಗಿ ಸಿದ್ದಪಡಿಸಿದ ಕುಡುಪು ಗುಂಪು ಹತ್ಯೆಯ ಕುರಿತ ಸತ್ಯಶೋಧನಾ ವರದಿಯನ್ನು ಬೆಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ಶನಿವಾರ ಬಿಡುಗಡೆ ಮಾಡಲಾಯಿತು.
ರಾಜ್ಯ ಆಡಳಿತವು, ಶೋಷಿತ ಸಮುದಾಯಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸುವಲ್ಲಿ ವಿಫಲವಾಗಿದೆ ಎಂದು ದಲಿತ ಸಂಘರ್ಷ ಸಮಿತಿ-ಅಂಬೇಡ್ಕರ್ ವಾದದ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು. ಅಶ್ರಫ್ ಪ್ರಕರಣದಲ್ಲಿ ಮತ್ತು ಕತ್ತರಘಟ್ಟದ ದಲಿತ ಯುವಕನ ಹತ್ಯೆ ಪ್ರಕರಣಗದಲ್ಲಿ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಸಂತ್ರಸ್ತರ ಕುಟುಂಬಗಳಿಗೆ ಭೇಟಿ ನೀಡದಿರುವುದು, ಕಾನೂನು ಆಡಳಿತದ ಬಗ್ಗೆ ಸಾರ್ವಜನಿಕ ನಂಬಿಕೆಯನ್ನು ಕುಂದಿಸಿದೆ ಎಂದು ಅವರು ಅಭಿಪ್ರಾಯಪಟ್ಟರು. ದಕ್ಷಿಣ ಕನ್ನಡದಲ್ಲಿ ದಶಕಗಳಿಂದಲೂ ಸೌಹಾರ್ದತೆ ಮತ್ತು ಮಾನವೀಯತೆ ಕುಂದುತ್ತಿದೆ ಎಂಬುದರ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಅಶ್ರಫ್ ಅವರ ಸಹೋದರ ಜಬ್ಬಾರ್ ಅವರು ಹೇಳಿದಂತೆ “ಇದೇ ಕೊನೆಯ ಗುಂಪು ಹತ್ಯೆಯಾಗಬೇಕು” ಎಂಬುದನ್ನು ಮಾವಳ್ಳಿ ಶಂಕರ್ ಅವರು ಒತ್ತಾಯಿಸಿದರು.
ವರ್ಣಭೇದ ನೀತಿಗಳ ಸಮಕಾಲೀನ ಸ್ವರೂಪಗಳ ಕುರಿತ ವಿಶ್ವಸಂಸ್ಥೆಯ ವಿಶೇಷ ವರದಿಗಾರರಾಗಿರುವ ಅಶ್ವಿನಿ ಕೆ ಪಿ ಅವರು ಮಾತನಾಡಿ, ಎಲ್ಲಾ ರೀತಿಯ ಜನಾಂಗೀಯ ತಾರತಮ್ಯಗಳ ನಿರ್ಮೂಲನೆಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಒಪ್ಪಂದಗಳಿಗೆ ಭಾರತ ಸಹಿ ಹಾಕಿರುವುದರಿಂದ, ಇಂತಹ ಹಿಂಸಾಚಾರಕ್ಕೆ ಕಾರಣವಾಗುವ ದ್ವೇಷವನ್ನು ತೊಡೆದುಹಾಕಲು ಭಾರತ ಬದ್ಧವಾಗಿದೆ ಎಂಬುದಾಗಿ ಭಾರತ ಸಹಿ ಮಾಡಿದೆ ಎಂಬುದನ್ನು ಒತ್ತಿ ಹೇಳಿದರು. ಅಲ್ಲದೇ, ಪಹಲ್ಗಾಮ್ ದಾಳಿಯ ನಂತರ ಮುಸ್ಲಿಮರನ್ನು ದುಷ್ಟರನ್ನಾಗಿ ಬಿಂಬಿಸಲಾಗಿದೆ ಎಂದು ಅಭಿಪ್ರಾಯಪಟ್ಟರು. ಪಹಲ್ಗಾಮ್ ದಾಳಿಯನ್ನು ಕೋಮುವಾದಗೊಳಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಿವೆ. ಅಶ್ರಫ್ ಹತ್ಯೆಯಂತಹ ಘಟನೆಗಳಿಗೆ ಮಾಧ್ಯಮಗಳೇ ಕಾರಣ, ಅವು ಮತ್ತಷ್ಟೂ ಜವಾಬ್ದಾರಿಯುತವಾಗಿ ವರದಿ ಮಾಡಬೇಕು ಎಂದು ಅಶ್ವಿನಿ ಕೆ ಪಿ ಅಭಿಪ್ರಾಯಪಟ್ಟ ಅವರು ಕಾನೂನನ್ನು ಜಾರಿ ಮಾಡಬೇಕಾದ ಸಂಸ್ಥೆಗಳು ಅಂಚಿನಲ್ಲಿರುವ ವ್ಯಕ್ತಿಗಳ ಬಗ್ಗೆ ನಿರ್ಲಕ್ಷ್ಯ ಮತ್ತು ಪಕ್ಷಪಾತವನ್ನು ಪ್ರದರ್ಶಿಸುವುದು ಆಘಾತಕಾರಿಯಾಗಿದೆ ಎಂದರು.
ಆಲ್ ಇಂಡಿಯಾ ಅಸೋಸಿಯೇಷನ್ ಫಾರ್ ಜಸ್ಟಿಸ್ ಅಧ್ಯಕ್ಷೆ ಮೈತ್ರೇಯಿ ಕೃಷ್ಣನ್ ಅವರು ಮೊಹಮ್ಮದ್ ಅಶ್ರಫ್ ಅವರ ಗುಂಪು ಹತ್ಯೆಯನ್ನು 2018ರ ತಹಸೀನ್ ಪೂನಾವಾಲಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ವಿವರಿಸಿದರು. ಇದು ಕೇವಲ ಕೊಲೆಯಲ್ಲ, ಬದಲಿಗೆ ದ್ವೇಷ ಅಪರಾಧ ಎಂದು ಒತ್ತಿ ಹೇಳಿದರು. ಇಂತಹ ದ್ವೇಷ ಅಪರಾಧಗಳು ಸಂವಿಧಾನದ ಮೌಲ್ಯಗಳ ಮೇಲಿನ ದಾಳಿಯಾಗಿದೆ ಎಂದವರು ವಿವರಿಸಿದರು. ಎಫ್ ಐ ಆರ್ ದಾಖಲಿಸುವಲ್ಲಿ ವಿಳಂಬ ಮಾಡಿದ, ಸುಪ್ರೀಂ ಕೋರ್ಟ್ ಗುಂಪು ಹತ್ಯೆಯ ಮಾರ್ಗಸೂಚಿಗಳನ್ನು ಪಾಲಿಸದ ಪೆÇಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಪ್ರಕರಣದ ತನಿಖೆ ಮತ್ತು ದಾಖಲಾತಿಯಲ್ಲಿ ಪೆÇಲೀಸರು ತೋರಿದ ನಿರ್ಲಕ್ಷ್ಯದಿಂದಾಗಿ ಆರೋಪಿಗಳಿಗೆ ತಾಂತ್ರಿಕ ಕಾರಣಗಳ ಆಧಾರದ ಮೇಲೆ ಜಾಮೀನು ದೊರೆತಿವೆ ಎಂದು ವಕೀಲರಾಗಿರುವ ವಿನಯ್ ಶ್ರೀನಿವಾಸ್ ಹೇಳಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಎತ್ತಿಹಿಡಿಯಲು ವಿವಿಧ ನಾಗರಿಕ ಸಮಾಜ ಗುಂಪುಗಳೊಂದಿಗೆ ಸಭೆ ನಡೆಸುವಂತೆ ಅವರು ರಾಜ್ಯಾಡಳಿತಕ್ಕೆ ಕರೆ ನೀಡಿದರು. ದ್ವೇಷ ಮತ್ತು ನಕಲಿ ಸುದ್ದಿಗಳ ವಿರುದ್ಧ ಹೊಸ ಕಾನೂನುಗಳನ್ನು ಪರಿಚಯಿಸುವ ಮತ್ತು ವಿಶೇಷ ಕಾರ್ಯಪಡೆಗಳನ್ನು ನೇಮಿಸುವ ಸರ್ಕಾರದ ಕ್ರಮಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಕಾರಣ, ಸರ್ಕಾರವು ಈಗಾಗಲೇ ಅಸ್ತಿತ್ವದಲ್ಲಿರುವ ಮೂಲಭೂತ ಕಾನೂನುಗಳನ್ನು ಜಾರಿಗೆ ತರಲು ವಿಫಲವಾಗಿದೆ ಎಂದವರು ವಿವರಿಸಿದರು.
ಪೆÇಲೀಸರ ಮತ್ತು ಸಾರ್ವಜನಿಕರ ಪ್ರತಿಕ್ರಿಯೆಯನ್ನು ಗಮನಿಸಿದರೆ ತಮಗೆ ತೀವ್ರ ನಿರಾಶೆಯಾಗಿದೆ ಎಂದು ಎಸ್ ಐ ಒ ಕರ್ನಾಟಕದ ಮೊಹಮ್ಮದ್ ಹಯ್ಯಾನ್ ತಿಳಿಸಿದರು. ಎಲ್ಲರೂ ತನಿಖೆಯನ್ನು ಸಿಐಡಿಗೆ ವರ್ಗಾಯಿಸುವಂತೆ, ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸುವಂತೆ ಮತ್ತು ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಗುಂಪು ಹತ್ಯೆಗೊಳಗಾದ ಮೊಹಮ್ಮದ್ ಅಶ್ರಫ್ ಅವರ ಸಹೋದರ ಜಬ್ಬಾರ್ ಉಪಸ್ಥಿತರಿದ್ದರು.
0 comments:
Post a Comment