ಮಂಗಳೂರು, ಜೂನ್ 28, 2025 (ಕರಾವಳಿ ಟೈಮ್ಸ್) : ಜನ ಬುದ್ದಿವಂತರಾದಂತೆ, ವಿದ್ಯಾವಂತರಾದಂತೆ ಹಣದ ಆಸೆಗೆ ಬಲಿಯಾಗಿ ಹೆಚ್ಚಾಗಿ ಸೈಬರ್ ವಂಚಕರ ಜಾಲಕ್ಕೆ ಬಲಿಯಾಗುತ್ತಿರುವ ಪ್ರಕರಣ ಜಾಸ್ತಿಯಾಗುತ್ತಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಕಾಲಕಾಲಕ್ಕೆ ಸೂಕ್ತ ಎಚ್ಚರಿಕೆ ನೀಡುತ್ತಿರುವ ಹೊರತಾಗಿಯೂ ಜನ ಇಂತಹ ಸೈಬರ್ ಅಪರಾಧಿಗಳ ಬಲೆಗೆ ಬೀಳುವ ಘಟನೆಗಳು ವರದಿಯಾಗುತ್ತಲೇ ಇದೆ.
ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರು ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಹೂಡಿಕೆ ಮೋಸದ ಬಲೆಗೆ ಬೀಳಬೇಡಿ! ಹೂಡಿಕೆ ಮೋಸ ಎಂದರೇನು?
ಸೈಬರ್ ಅಪರಾಧಿಗಳು ನಕಲಿ ಹೂಡಿಕೆ ಅವಕಾಶಗಳ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭದ ಭರವಸೆ ನೀಡಿ ನಿಮ್ಮನ್ನು ಮೋಸಗೊಳಿಸುತ್ತಾರೆ. ನೀವು ಹಣ ಹೂಡಿದ ನಂತರ ನಿಮ್ಮ ಹಣ ಕಣ್ಮರೆಯಾಗುತ್ತದೆ. ಈ ರೀತಿಯ ಮೋಸಗಳು ವೃತ್ತಿಪರವಾಗಿ ಕಾಣಿಸುತ್ತವೆ ಮತ್ತು ಅದಕ್ಕಾಗಿ ಕೆಳಗಿನ ವಿಧಾನಗಳನ್ನು ಬಳಸಬಹುದು.
ನಕಲಿ ವೆಬ್ ಸೈಟುಗಳು, ವಾಟ್ಸಾಪ್ ಗುಂಪುಗಳು ಮತ್ತು ಟೆಲಿಗ್ರಾಮ್ ಚಾನೆಲ್ ಗಳು, ಸಿನಿಮಾ ತಾರೆಯರ/ಹೆಸರಾಂತ ವ್ಯಕ್ತಿಗಳ ನಕಲಿ ಪ್ರಮಾಣಪತ್ರಗಳು, ಮೋಸದ ಆಪ್ ಗಳು ಅಥವಾ ಸೋಷಿಯಲ್ ಮೀಡಿಯಾ ಜಾಹೀರಾತುಗಳು.
ಸಾಮಾನ್ಯ ಎಚ್ಚರಿಕೆ ಸಂಕೇತ :
“ಖಚಿತ” ಹೆಚ್ಚುವರಿ ಲಾಭದ ಭರವಸೆ, ತಕ್ಷಣ ಹೂಡಿಕೆಗೆ ಒತ್ತಡ, ಹಣದ ದ್ವಿಗುಣ/ ತ್ರಿಗುಣ ಲಾಭದ ಭರವಸೆ, ನೋಂದಾಯಿಸದ ಕಂಪೆನಿಗಳು ಅಥವಾ ಏಜೆಂಟ್ ಗಳು, ಯುಪಿಐ/ ಕ್ರಿಪ್ಟೊ ಪಾವತಿ ಕೇಳುವುದು, ನಕಲಿ ಲಾಭ ತೋರಿಸುವ ನಕಲಿ ಸ್ಕ್ರೀನ್ ಶಾಟ್ ಗಳು.
ನಿಜವಾಗಿ ಬಲಿಯಾದ ಪ್ರಕರಣಗಳು :
ಸುರತ್ಕಲ್, ಮಂಗಳೂರು : ವಾಟ್ಸಾಪ್ ಗ್ರೂಪ್ ಗಳ ಮೂಲಕ ಕ್ರಿಪ್ಟೋ ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡುವಂತೆ ನಂಬಿಸಿ ಹಂತ ಹಂತವಾಗಿ 1.57 ಕೋಟಿ ಹಣ ಹೂಡಿಕೆ ಮಾಡಿಸಿ ಮೋಸ ಮಾಡಿದ್ದಾರೆ.
ಕೆ.ಪಿ.ಟಿ, ಮಂಗಳೂರು : ಶೇರು ಮಾರುಕಟ್ಟೆ ಲಾಭದ ಆಶಯದಲ್ಲಿ ವಾಟ್ಸಪ್ ತರಬೇತಿ ಗ್ರೂಪ್ ಮೂಲಕ 37.49 ಲಕ್ಷ ಹೂಡಿಕೆ ಮಾಡಿದ್ದು, ಬಳಿಕ ಲಾಭಾಂಶ ಪಡೆಯಲು ಹೆಚ್ಚು ತೆರಿಗೆ ಪಾವತಿಸುವಂತೆ ಒತ್ತಾಯಿಸಿ ಮೋಸ ಮಾಡಿದ್ದಾರೆ.
ಪಂಜಿಮೊಗರು, ಮಂಗಳೂರು : ಇನ್ಸ್ಟಾಗ್ರಾಮಿನಲ್ಲಿ “ವರ್ಕ್ ಫ್ರಂ ಹೋಂ” ಜಾಹೀರಾತು ನೆಪದಲ್ಲಿ 27.01 ಲಕ್ಷ ಹಣವನ್ನು ಅವರ ಹಾಗೂ ಕುಟುಂಬ ಸದಸ್ಯರ ಖಾತೆಯಿಂದ ವರ್ಗಾವಣೆ ಮಾಡಿಸಿ ಮೋಸ ಮಾಡಿದ್ದಾರೆ.
ಕಂಕನಾಡಿ, ಮಂಗಳೂರು : ಫೇಸ್ ಬುಕ್ ಜಾಹೀರಾತು ಮುಖಾಂತರ ಶೇರು ಮಾರುಕಟ್ಟೆ ಲಾಭದ ಭರವಸೆ ನೀಡಿ 30.55 ಲಕ್ಷ ಹೂಡಿಕೆ ಮಾಡುವಂತೆ ನಂಬಿಸಿ, ಹೂಡಿಕೆ ನಂತರ ಹಣ ನೀಡದೇ ಮೋಸ ಮಾಡಿದ್ದಾರೆ.
ಉರ್ವಾ, ಮಂಗಳೂರು : ಟೆಲಿಗ್ರಾಂ ಖಾತೆ ಮೂಲಕ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಸಲಹೆ ನೀಡಿ 13.57 ಲಕ್ಷ ಹೂಡಿಕೆ ಮಾಡಿಸಿ, ಯಾವುದೇ ಲಾಭ, ಹೂಡಿಕೆ ಹಣ ನೀಡದೇ ಮೋಸ ಮಾಡಿದ್ದಾರೆ.
0 comments:
Post a Comment