ಬಂಟ್ವಾಳ, ಜುಲೈ 28, 2025 (ಕರಾವಳಿ ಟೈಮ್ಸ್) : ಬೈಕೊಂದು ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರೆ ಗಾಯಗೊಂಡ ಘಟನೆ ಪಿಲಾತಬೆಟ್ಟು ಗ್ರಾಮದ ಮೂರ್ಜೆ ಎಂಬಲ್ಲಿನ ವಿಶಾಲನಗರ 2ನೇ ಕ್ರಾಸ್ ಬಳಿ ಜುಲೈ 25 ರಂದು ಸಂಭವಿಸಿದೆ.
ಗಾಯಗೊಂಡ ಸ್ಕೂಟರ್ ಸವಾರೆಯನ್ನು ಕವಿತಾ ಎಂದು ಹೆಸರಿಸಲಾಗಿದೆ. ಇವರು ತಮ್ಮ ಸ್ಕೂಟರಿನಲ್ಲಿ ತೆರಳುತ್ತಿದ್ದ ವೇಳೆ ಪಿಲಾತಬೆಟ್ಟು ಗ್ರಾಮದ ಮೂರ್ಜೆ ಎಂಬಲ್ಲಿ ವಿಶಾಲನಗರ 2ನೇ ಕ್ರಾಸಿಗೆ ಹೋಗುವ ರಸ್ತೆ ಬಳಿ ತಲುಪುತ್ತಿದ್ದಂತೆ ತನ್ನ ಸ್ಕೂಟರನ್ನು ಮನೆ ಕಡೆಗೆ ಹೋಗುವ ಸಲುವಾಗಿ ಸ್ಕೂಟರಿನ ಬಲ ಬದಿಯ ಇಂಡಿಕೇಟರ್ ಹಾಕಿ ತಿರುಗಿಸುತ್ತಿದ್ದರು. ಇದೇ ವೇಳೆ ಬಿ ಸಿ ರೋಡ್ ಕಡೆಯಿಂದ ಮೂರ್ಜೆ ಕಡೆಗೆ ಬರುತ್ತಿದ್ದ ಯಮಹಾ ಬೈಕ್ ಸವಾರ ಸೂರಜ್ ಎಂಬವರು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಬದಿಗೆ ಬಂದು ಕವಿತಾ ಅವರ ಸ್ಕೂಟರಿನ ಇಂಡಿಕೇಟರ್ ಗಮನಿಸದೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಕವಿತಾ ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಸೊಂಟ, ತಲೆ ಹಾಗೂ ಕಾಲಿಗೆ ಗಾಯವಾಗಿರುತ್ತದೆ. ಅವರನ್ನು ಪಡೀಲ್ ಜನಪ್ರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಎರಡೂ ದ್ವಿಚಕ್ರ ವಾಹನಗಳು ಜಖಂಗೊಂಡಿದೆ. ಈ ಬಗ್ಗೆ ಕವಿತಾ ಅವರ ಸಂಬಂಧಿ ಬಾಲಕೃಷ್ಣ ಶೆಟ್ಟಿ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















0 comments:
Post a Comment