ಮಂಗಳೂರು, ಜುಲೈ 18, 2025 (ಕರಾವಳಿ ಟೈಮ್ಸ್) : ಖಚಿತ ಮಾಹಿತಿ ಮೇರೆಗೆ ಅತ್ಯಂತ ಚಾಣಾಕ್ಷಮತಿಯ ದಾಳಿ ನಡೆಸಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ನೇತೃತ್ವದ ಸೆನ್ ಅಪರಾಧ ಠಾಣೆಯ ಪೊಲೀಸರು ಐಷಾರಾಮಿ ಬಂಗಲೆ ಮೂಲಕ ಬೃಹತ್ ಉದ್ಯಮಿಯ ವೇಷ ತೊಟ್ಟು ಉದ್ಯಮಿಗಳು ಮತ್ತು ಶ್ರೀಮಂತ ವ್ಯಕ್ತಿಗಳಿಗೆ ಕಡಿಮೆ ಬಡ್ಡಿದರದಲ್ಲಿ ನೂರಾರು ಕೋಟಿ ರೂಪಾಯಿ ಸಾಲ ಒದಗಿಸಿಕೊಡುವ ಭರವಸೆ ನೀಡಿ, ಕೋಟಿಗಟ್ಟಲೆ ಹಣ ಸಂಗ್ರಹಿಸಿ, ವಂಚಿಸುತ್ತಿದ್ದ ಖತರ್ನಾಕ್ ವಂಚಕನೋರ್ವನನ್ನು ಗುರುವಾರ ರಾತ್ರಿ ಬಲೆಗೆ ಕೆಡವಿದ್ದಾರೆ.
ಬಂಧಿತ ವಂಚಕನನ್ನು ಕಂಕನಾಡಿ, ಬಜಾಲ್-ಬೊಲ್ಲಗುಡ್ಡೆ ನಿವಾಸಿ ಜಾನ್ ಸಲ್ದಾನಾ ಎಂಬವರ ಪುತ್ರ ರೋಶನ್ ಸಲ್ದಾನಾ (43) ಎಂದು ಹೆಸರಿಸಲಾಗಿದೆ. ಮಂಗಳೂರು ನಗರ ಪೆÇಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ, ಎಸಿಪಿ ರವೀಶ್ ನಾಯಕ್ ನೇತೃತ್ವದ ಸಿಇಎನ್ ಪೆÇಲೀಸ್ ತಂಡ ಈ ಯಶಸ್ವಿ ದಾಳಿ ಸಂಘಟಿಸಿದ್ದು, ದಾಳಿ ವೇಳೆ ಆತನ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 6,72,947/- ಮೌಲ್ಯದ ದೇಶಿ ಮತ್ತು ವಿದೇಶಿ ಮದ್ಯ ದೊರೆತಿದ್ದು, ನಂತರ ಸದ್ರಿ ಮಧ್ಯವನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡು ಸೆನ್ ಕ್ರೈಂ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 39/2025 ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿತನ ದಸ್ತಗಿರಿ ಮಾಡಲಾಗಿದೆ ಹಾಗೂ ಆರೋಪಿತನ ಮನೆಯಿಂದ ದಾಖಲಾತಿಗಳನ್ನು, ಖಾಲಿ ಚೆಕ್ ಗಳನ್ನು ಹಾಗೂ ಸುಮಾರು 667 ಗ್ರಾಂ ಚಿನ್ನಭಾರಣಗಳು ಮತ್ತು ಅಂದಾಜು 2.75 ಕೋಟಿ ಮೌಲ್ಯದ ವಜ್ರದ ಉಂಗುರವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಆರೋಪಿಯ ವಿರುದ್ಧ ಮಂಗಳೂರು ಸೆನ್ ಕ್ರೈಂ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 22/2025 ಕಲಂ: 316(2), 316(5) 318(2), 318(3) ಜೊತೆಗೆ 3(5) ಭಾರತೀಯ ನ್ಯಾಯ ಸಂಹಿತೆ ಹಾಗೂ ಅಪರಾಧ ಕ್ರಮಾಂಕ 30/2025 ಕಲಂ 316(2), 316(5), 318(2), 318 (3), 61(2) ಜೊತೆಗೆ 3(5) ಭಾರತೀಯ ನ್ಯಾಯ ಸಂಹಿತೆಯಂತೆ ವಂಚನೆ ಪ್ರಕರಣಗಳು ದಾಖಲಾಗಿರುತ್ತದೆ.
ಆರೋಪಿಯ ವಿರುದ್ದ ಚಿತ್ರದುರ್ಗ, ಮುಂಬೈ ಸೇರಿದಂತೆ ವಿವಿಧೆಡೆ ವಂಚನೆ ಪ್ರಕರಣಗಳು ದಾಖಲಾಗಿರುತ್ತವೆ. ಆರೋಪಿ ಇತರರೊಂದಿಗೆ ಸೇರಿ ಅವಶ್ಯಕತೆ ಇರುವ ಉದ್ದಿಮೆದಾರರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದು, ಕಳೆದ 3 ತಿಂಗಳಲ್ಲಿ ಈತನ ವ್ಯವಹಾರ ಪರಿಶೀಲಿಸಿದಾಗ ಈತ ಗೋವಾ, ಬೆಂಗಳೂರು, ಪುಣೆ, ವಿಜಯಪುರ, ತುಮಕೂರು, ಕಲ್ಕತ್ತಾ, ಸಾಂಗ್ಲಿ, ಲಕ್ನೋ, ಬಾಗಲಕೋಟೆ ಇತ್ಯಾದಿ ಕಡೆಗಳಲ್ಲಿ ಉದ್ದಿಮೆದಾರರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಸುಮಾರು 32 ಕೋಟಿ ರೂಪಾಯಿಗಳನ್ನು ಆರೋಪಿ ಮತ್ತು ಇತರರು ಪಡೆದುಕೊಂಡಿರುವುದು ಕಂಡುಬಂದಿರುತ್ತದೆ.
ದಾಳಿ ವೇಳೆ ಪೆÇಲೀಸರು ಆರೋಪಿಯ ಮನೆಯೊಳಗೆ ಹಲವಾರು ರಹಸ್ಯ ಕೋಣೆಗಳು ಇರುವುದನ್ನು ಪತ್ತೆಹಚ್ಚಿದ್ದಾರೆ. ಆ ಕೋಣೆಗಳನ್ನು ಆರೋಪಿ, ಹಠಾತ್ ನಾಪತ್ತೆ ಮತ್ತು ಬಂಧನದಿಂದ ತಪ್ಪಿಸಿಕೊಳ್ಳಲು ಬಳಸುತ್ತಿದ್ದ ಎಂದು ತಿಳಿದು ಬಂದಿದೆ. ಸಲ್ಡಾನಾ ತಾನು ಉದ್ಯಮಿ, ಫೈನಾನ್ಸರ್ ಎಂದು ಹೇಳಿ, ಗ್ರಾಹಕರನ್ನು, ಹೆಚ್ಚಾಗಿ ಉದ್ಯಮಿಗಳು ಮತ್ತು ಶ್ರೀಮಂತ ವ್ಯಕ್ತಿಗಳನ್ನು ತನ್ನ ಮನೆಗೆ ಆಹ್ವಾನಿಸಿ 100 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಸಾಲದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡುತ್ತಿದ್ದರು. ಬಳಿಕ ಸ್ಟಾಂಪ್ ಡ್ಯೂಟಿ, ಕಮಿಷನ್ ಮತ್ತು ಇತರ ಶುಲ್ಕಕ್ಕಾಗಿ 4 ಕೋಟಿ ರೂಪಾಯಿಗಳವರೆಗೆ ಹಣ ಪಾವತಿಸಲು ಕೇಳುತ್ತಿದ್ದನು. ಅವರಿಂದ ನಗದು ರೂಪದಲ್ಲಿ ಮಾತ್ರ ಹಣ ಸ್ವೀಕರಿಸುತ್ತಿದ್ದ. ಹಣ ಪಡೆದ ನಂತರ ನಾಪತ್ತೆಯಾಗುತ್ತಿದ್ದ ಎಂದು ಆರೋಪಿಸಲಾಗಿದೆ.
ದಾಳಿಯ ಸಮಯದಲ್ಲಿ ಪೆÇಲೀಸರು, ರಿಮೋಟ್ ಆಧಾರಿತ ಪ್ರವೇಶ ದ್ವಾರ, ಮನೆ ಮತ್ತು ಸುತ್ತಮುತ್ತ ಹಲವು ಸಿಸಿಟಿವಿ ಕ್ಯಾಮೆರಾಗಳು, ದುಬಾರಿ ವಿದೇಶಿ ಮದ್ಯ ಇರುವ ಬಾರ್, ಹಲವು ರಹಸ್ಯ ಕೋಣೆಗಳನ್ನು ಹೊಂದಿರುವ ಒಳಾಂಗಣ ಮತ್ತು ಬಂಗ್ಲೋದಲ್ಲಿ ಅಡಗುತಾಣಗಳನ್ನು ಪತ್ತೆಹಚ್ಚಿದ್ದಾರೆ. ಆರೋಪಿಯನ್ನು ಶುಕ್ರವಾರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದಿದ್ದಾರೆ.
0 comments:
Post a Comment