ಮಂಗಳೂರು, ಜುಲೈ 04, 2025 (ಕರಾವಳಿ ಟೈಮ್ಸ್) : ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಬಗ್ಗೆ, ವ್ಯಕ್ತಿಯೊಬ್ಬ ಮಾಹಿತಿ ನೀಡುವುದಾಗಿ ಬರವಣಿಗೆ ಇರುವ ಪತ್ರವು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಸದ್ರಿ ವ್ಯಕ್ತಿಯಿಂದ ಗುರುವಾರ ಜಿಲ್ಲಾ ಎಸ್ಪಿ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ಸಲ್ಲಿಕೆಯಾಗಿರುವ ದೂರಿನ ಬಗ್ಗೆ ನ್ಯಾಯಾಲಯದಿಂದ ಅಗತ್ಯ ಅನುಮತಿ ಪಡೆದು ಶುಕ್ರವಾರ (ಜುಲೈ 4) ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 39/2025, ಕಲಂ 211(ಎ) ಬಿ ಎನ್ ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನುಕ್ರಮ ಜರಗಿಸಲಾಗುವುದು ಎಂದು ಜಿಲ್ಲಾ ಎಸ್ಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದಿನಿಂದ ಹಲವಾರು ಅಪರಾಧ ಕೃತ್ಯಗಳು ನಡೆದಿದ್ದು, ದೂರುದಾರರಿಗೆ ಜೀವಬೆದರಿಕೆ ಒಡ್ಡಿ, ಸದ್ರಿ ಅಪರಾದ ಕೃತ್ಯಗಳ ಮೃತದೇಹಗಳನ್ನು ದೂರುದಾರರ ಮೂಲಕ ರಹಸ್ಯವಾಗಿ ವಿಲೇವಾರಿ ಮಾಡಿಸಿರುತ್ತಾರೆ. ಈ ರೀತಿಯಲ್ಲಿ ಹಲವಾರು ಮೃತದೇಹಗಳನ್ನು ದೂರುದಾರರು ವಿಲೇವಾರಿ ಮಾಡಿದ್ದು, ಪ್ರಸ್ತುತ ದೂರುದಾರರಿಗೆ ಪಾಪಪ್ರಜ್ಞೆ ಕಾಡುತ್ತಿರುವುದರಿಂದ, ತನಗೆ ಹಾಗೂ ತನ್ನ ಕುಟುಂಬಕ್ಕೆ ಕಾನೂನಾತ್ಮಕ ರಕ್ಷಣೆ ದೊರೆತ ಕೂಡಲೇ, ಸದ್ರಿ ಅಪರಾಧ ಕೃತ್ಯಗಳನ್ನು ನಡೆಸಿದವರ ಸಂಪೂರ್ಣ ಮಾಹಿತಿಯನ್ನು ಹಾಗೂ ತಾನು ಮೃತದೇಹಗಳನ್ನು ವಿಲೇವಾರಿ ಮಾಡಿದ ಸ್ಥಳಗಳನ್ನು ಪೊಲೀಸರಿಗೆ ತೋರಿಸಲು ತಾನು ಸಿದ್ದವಿರುವುದಾಗಿ ಅವರು ಗುರುವಾರ (ಜುಲೈ 3) ಜಿಲ್ಲಾ ಎಸ್ಪಿ ಕಛೇರಿಗೆ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ಸಲ್ಲಿಕೆಯಾಗಿತ್ತು.
ಸದ್ರಿ ದೂರುದಾರರು ದೂರಿನಲ್ಲಿ ತನ್ನ ಹೆಸರು ಮತ್ತು ಮಾಹಿತಿಯನ್ನು ಗೌಪ್ಯವಾಗಿ ಇಡುವಂತೆ ವಿನಂತಿಸಿಕೊಂಡ ಮೇರೆಗೆ, ದೂರುದಾರರ ಮಾಹಿತಿಯನ್ನು ಪೊಲೀಸ್ ಮೂಲಗಳಿಂದ ನೀಡಲಾಗುವುದಿಲ್ಲ ಎಂದು ಕೂಡಾ ಎಸ್ಪಿ ತಿಳಿಸಿದ್ದಾರೆ.
0 comments:
Post a Comment