ಬಂಟ್ವಾಳ, ಜುಲೈ 31, 2025 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ವ್ಯಕ್ತಿಯೊಬ್ಬರು ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಖರೀದಿಸಿ ಮೋಸ ಹೋದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೀರೋ ವಿಡಾ ಕಂಪೆನಿಗೆ ಸೇರಿದ ವಿ1 ಪ್ರೊ ಮಾದರಿಯ ವಿದ್ಯುತ್ ಚಾಲಿತ ದ್ವಿಚಕ್ರ ವಾಹನವನ್ನು ಇವರು ಕಳೆದ 8 ತಿಂಗಳ ಹಿಂದೆ ಖರೀದಿಸಿದ್ದು, ವಾಹನ ಖರೀದಿಗೆ ಮುಂಚಿತವಾಗಿ ಕಂಪೆನಿ ವಿವಿಧ ಜಾಹೀರಾತುಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದು, ವಾಹನ ಖರೀದಿಸಿದ ಬಳಿಕ ಆಗುವ ಯಾವುದೇ ಸಮಸ್ಯೆಗಳಿಗೂ ಕ್ಯಾರೇ ಅನ್ನದೆ ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ ಎಂದವರು ಆರೋಪಿಸಿದ್ದಾರೆ.
ಕಳೆದ ಎಂಟು ತಿಂಗಳ ಹಿಂದೆ ಕಂಪೆನಿಯ ಪಾಣೆಮಂಗಳೂರು ವೆಸ್ಟ್ ಕೋಸ್ಟ್ ಹೀರೋ ಎಂಬ ಶೋರೂಮಿನಿಂದ ಈ ವಾಹನವನ್ನು 1.38 ಲಕ್ಷ ರೂಪಾಯಿ ಮೊತ್ತಕ್ಕೆ ವ್ಯವಹಾರ ಕುದುರಿಸಿ ಖರೀದಿಸಿದ್ದು, ಖರೀದಿ ಸಂದರ್ಭ ಕಂಪೆನಿಗೆ ಸೇರಿದವರು ಸುಮಾರು 6 ಗಂಟೆ ವಿದ್ಯುತ್ ಚಾರ್ಜ್ ಮಾಡಿದರೆ 100 ಕಿ ಮೀ ದೂರ ಓಡಿಸಬಹುದು ಎಂಬ ಭರವಸೆ ನೀಡಿದ್ದರು. ಆದರೆ ವಾಹನ ಖರೀದಿಸಿದ ಕೆಲವೇ ದಿನಗಳಲ್ಲಿ ಸಮಸ್ಯೆ ತಲೆದೋರಿದ್ದು, ಕಳೆದ 8 ತಿಂಗಳ ಅವಧಿಯಲ್ಲಿ ಸುಮಾರು 21 ಬಾರಿ ವಾಹನ ಹಠಾತ್ ಬಂದ್ ಬೀಳುವ ಸಮಸ್ಯೆ ಎದುರಾಗಿದೆ ಎನ್ನುವ ಮಾಲಕ ಕೊನೆಯ ಬಾರಿ ಮನೆಯಿಂದ ಹೊರಡುವಷ್ಟರಲ್ಲಿ ಮನೆ ಸಮೀಪವೇ ವಾಹನ ಬಂದ್ ಬಿದ್ದಿದ್ದು, ಅದಾಗಿ ಏಳು ದಿನಗಳು ಕಳೆದರೂ ಕಂಪೆನಿಯಾಗಲೀ, ಡೀಲರ್ ಗಳಾಗಲೀ ಯಾವುದೇ ಸ್ಪಂದನೆ ನೀಡದೆ ಇರುವ ಪರಿಣಾಮ ಇನ್ನೂ ವಾಹನ ಅಲ್ಲೇ ರಸ್ತೆ ಬದಿಯಲ್ಲಿ ಬಾಕಿಯಾಗಿದೆ ಎಂದಿದ್ದಾರೆ.
ವಾಹನದ ಸಮಸ್ಯೆ ಬಗ್ಗೆ ಕಂಪೆನಿಗೆ ಹಾಗೂ ಡೀಲರಿಗೆ ಸಾಕಷ್ಟು ಬಾರಿ ದೂರಿಕೊಂಡರೂ ಯಾವುದೇ ಸ್ಪಂದನೆ ಇಲ್ಲ. ಕಂಪೆನಿಯ ಪ್ರಮುಖರಿಗೆ ಕರೆ ಮಾಡಿದರೂ ಹಿಂದಿಯಲ್ಲಿ ಮಾತನಾಡಿ ಯಾಮಾರಿಸುತ್ತಾರೆಯೇ ವಿನಃ ಪರಿಹಾರ ಏನೂ ದೊರೆಯುತ್ತಿಲ್ಲ. ಕಂಪೆನಿಯ ಪಾಣೆಮಂಗಳೂರು ಹಾಗೂ ಮಂಗಳೂರು ಶೋರೂಮಿಗೆ ಹಲವು ಬಾರಿ ಈ ಬಗ್ಗೆ ಖುದ್ದಾಗಿ ಭೇಟಿ ನೀಡಿ ಸಮಸ್ಯೆ ಬಗ್ಗೆ ವಿವರಿಸಿದರೂ ಅವರಿಂದಲೂ ಕನಿಷ್ಠ ಪರಿಹಾರದ ಭರವಸೆಯೂ ಇಲ್ಲ ಎನ್ನುತ್ತಾರೆ ಗ್ರಾಹ.
ಇದೀಗ ಸಾಲ ಮಾಡಿ ಖರೀದಿಸಿದ ವಾಹನ ಸಮಸ್ಯೆಯಿಂದಾಗಿ ಚಲಾವಣೆ ಇಲ್ಲದೆ ಕಂಗಾಲಾಗಿರುವ ಗ್ರಾಹಕ ಜಾಹೀರಾತಿನಿಂದ ಕಂಪೆನಿಗಳ ಬಣ್ಣದ ಮಾತುಗಳಿಗೆ ಮಾರುಹೋಗುವ ಮುನ್ನ ಗ್ರಾಹಕರು ಎಚ್ಚೆತುಕೊಳ್ಳಬೇಕು ಎಂದಿರುವ ಅವರು ಕಂಪೆನಿ ತಕ್ಷಣ ತನ್ನ ವಾಹನದ ಬಗ್ಗೆ ಸೂಕ್ತ ಸ್ಪಂದನೆ ಮಾಡದಿದ್ದಲ್ಲಿ ನ್ಯಾಯಾಲಯದ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.
0 comments:
Post a Comment