ಮಂಗಳೂರು, ಜುಲೈ 23, 2025 (ಕರಾವಳಿ ಟೈಮ್ಸ್) : ಜುಲೈ 12 ರಂದು ಜೈಲಿನಲ್ಲಿದ್ದ ನಾಲ್ಕು ಜನ ಖೈದಿಗಳು ಸಹ ಕೈದಿಯಿಂದ ಹಣ ಸುಲಿಗೆ ಮಾಡಿದ ಆರೋಪದಲ್ಲಿ ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ವಿಚಾರಣಾಧೀನ ಕೈದಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೆಸಿಒಸಿಎ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬುಧವಾರ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಜೈಲಿನಲ್ಲಿ ವಿಚಾರಣಾಧೀನ ಖೈದಿಗಳಾದ ಧನುಷ್ ಭಂಡಾರಿ ಅಲಿಯಾಸ್ ಧನು, ದಿಲೇಶ್ ಬಂಗೇರಾ ಅಲಿಯಾಸ್ ದಿಲ್ಲು, ಲೋಯ್ ವೇಗಸ್ ಅಲಿಯಾಸ್ ಲೋಯ್ ಹಾಗೂ ಸಚಿನ್ ತಲಪಾಡಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‍ಎಸ್) ಸೆಕ್ಷನ್ 308(4) ಮತ್ತು 3(5) ರ ಅಡಿಯಲ್ಲಿ ಪ್ರಕರಣ ಸಂಖ್ಯೆ 76/2025 ದಾಖಲಾಗಿದೆ.
ಆರೋಪಿಗಳು ಸಹ ಕೈದಿಯ ಮೇಲೆ ಹಲ್ಲೆ ನಡೆಸಿ 20,000 ರೂಪಾಯಿಗಳನ್ನು ಸುಲಿಗೆ ಮಾಡಿದ್ದಾರೆ, ಇವರು ಸಹ ಖೈದಿಯ ಮೇಲೆ ಹಲ್ಲೆ ನಡೆಸಿ ಆತನ ಪತ್ನಿಯ ಮೂಲಕ 20 ಸಾವಿರ ರೂಪಾಯಿ ಹಣವನ್ನು ಫೋನ್ ಪೇ ಮೂಲಕ ಲಪಟಾಯಿಸಿದ್ದರು.
ಆರೋಪಿಗಳು ಈಗಾಗಲೇ ಒಂದಕ್ಕಿಂತ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದು, ಪ್ರತಿಯೊಬ್ಬರಿಗೂ ಮೂರು ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಆದರೆ ಅವರ ಪುನರಾವರ್ತಿತ ಕ್ರಿಮಿನಲ್ ನಡವಳಿಕೆಗಾಗಿ ಅವರ ಮೇಲೆ ಕೆ ಕೋಕಾ ಕಾಯ್ದೆ ಪ್ರಕಾರ ದಾಖಲಾಗಿರುವ ಪ್ರಕರಣಕ್ಕಾಗಿ ಆ ಪ್ರಕಾರ ಸಂಘಟಿತ ಅಪರಾಧ, ಸಂಘಟಿತ ಅಪರಾಧ ಸಿಂಡಿಕೇಟ್ ಮತ್ತು ಕಾನೂನುಬಾಹಿರ ಚಟುವಟಿಕೆಯನ್ನು ಮುಂದುವರೆಸುವುದು ಎಂಬ ವ್ಯಾಖ್ಯಾನಗಳ ಅಡಿಯಲ್ಲಿ ಬರುವುದರಿಂದ ಅವರಿಗೆ ಈ ಕಾಯ್ದೆಯು ಕನಿಷ್ಠ 5 ವರ್ಷಗಳಿಂದ ಜೀವಾವಧಿವರೆಗೂ ಕಠಿಣ ಶಿಕ್ಷೆ ವಿಧಿಸಲು ಅವಕಾಶ ಇದೆ ಹಾಗೂ ಅವರ ಅಪರಾಧದಿಂದ ಸಾವು ಸಂಭವಿಸಿದರೆ ಜೀವಾವಧಿ ಅಥವಾ ಮರಣದಂಡನೆ ಶಿಕ್ಷೆ ವಿಧಿಸಬಹುದಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಅಲ್ಲದೆ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೆಸಿಒಸಿಎ) ಅಡಿಯಲ್ಲಿ ಪ್ರಕರಣ ದಾಖಲಾಗಿರುವ ವ್ಯಕ್ತಿಗಳ ವಿರುದ್ದ ಯಾವುದೇ ಹಿಂದಿನ ಪ್ರಕರಣಗಳು ಇಲ್ಲದಿದ್ದರೂ ಅವರ ವಿರುದ್ದ 5 ವರ್ಷಗಳಿಂದ ಜೀವಾವಧಿ ಶಿಕ್ಷೆಯವರೆಗೆ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ. ಅಲ್ಲದೆ ಕೆ ಕೋಕಾ ಪ್ರಕರಣ ಇರುವ ಆರೋಪಿಗಳ ಜೊತೆ ತಿರುಗಾಟ ಅಥವಾ ಅವರ ಜೊತೆಗೆ ಸಂಬಂಧ ಇರಿಸಿಕೊಳ್ಳುವ ವ್ಯಕ್ತಿಗಳಿಗೂ ಕೂಡಾ ಕನಿಷ್ಠ 5 ವರ್ಷ ಕಠಿಣ ಶಿಕ್ಷೆಯಾಗುವ ಸಾಧ್ಯತೆ ಇದೆ. ಆದುದರಿಂದ ಸಾರ್ವಜನಿಕರು ಇಂತಹ ಆರೋಪಿಗಳ ಬಗ್ಗೆ ಜಾಗರೂಕರಾಗಿರುವಂತೆ ಕಮಿಷನರ್ ಸುಧೀರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
0 comments:
Post a Comment