ಬಂಟ್ವಾಳ, ಜುಲೈ 09, 2025 (ಕರಾವಳಿ ಟೈಮ್ಸ್) : ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಹಾಗೂ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳಿಂದ ಅಖಿಲ ಭಾರತ ಮುಷ್ಕರದ ಅಂಗವಾಗಿ ಜೆಸಿಟಿಯು ಮತ್ತು ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಬಿ ಸಿ ರೋಡು ಮಿನಿ ವಿಧಾನಸೌಧದ ಮುಂಭಾಗ ಬುಧವಾರ ಪ್ರತಿಭಟನೆ ನಡೆಯಿತು
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಅವರು, ಕಾರ್ಮಿಕರ ಹಕ್ಕುಗಳನ್ನು ದಮನ ಮಾಡಲು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿ ಬಂಡವಾಳ ಶಾಹಿಗಳ ಹಿತ ಕಾಪಾಡಲು ಕೇಂದ್ರ ಸರಕಾರ ಮುಂದಾಗಿದೆ. ಇದಕ್ಕೆ ರಾಜ್ಯದ ಕಾಂಗ್ರೆಸ್ ಸರಕಾರ ಕೂಡಾ ಬೆಂಬಲಿಸುತ್ತಿದೆ ಎಂದು ಆರೋಪಿಸಿದರು.
ರೈತರ ಫಲವತ್ತಾದ ಭೂಮಿಗಳನ್ನು ಕಾಪೆರ್Çೀರೇಟ್ ಕಂಪೆನಿಗಳಿಗೆ ನೀಡುವ ಮೂಲಕ ರೈತರನ್ನು ಬೀದಿಪಾಲು ಮಾಡಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ಮಂದಾಗಿದ್ದು ಇದರ ವಿರುದ್ಧ ರೈತ ಕಾರ್ಮಿಕ ಜನಪರ ಚಳುವಳಿಗಳು ಜೊತೆಯಾಗಿ ಹೋರಾಡಬೇಕೆಂದು ಇದೇ ವೇಳೆ ಕರೆ ನೀಡಿದರು.
ಎಐಸಿಸಿಟಿಯು ಜಿಲ್ಲಾಧ್ಯಕ್ಷ ರಾಮಣ್ಣ ವಿಟ್ಲ ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರದ 11 ವರ್ಷಗಳ ಆಡಳಿತದಲ್ಲಿ ದುಡಿಯುವ ಜನರ ಸಂಕಷ್ಟಗಳು ಮಿತಿಮೀರಿದೆ. ದುಡಿಯುವ ಜನತೆಗೆ ಕನಿಷ್ಠ ಕೂಲಿ ಕೂಡಾ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಪೆರ್Çೀರೇಟ್ ಧಣಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಮೋದಿ ಸರಕಾರ ಕಾರ್ಮಿಕರ ಎಂಟು ಗಂಟೆಗಳ ಕೆಲಸದ ಹಕ್ಕನ್ನು ಕಿತ್ತುಹಾಕಿ ವಾರದಲ್ಲಿ ಎಪ್ಪತ್ತು ಗಂಟೆ ದುಡಿಯುವಂತೆ ಕಾಯ್ದೆಯ ಮೂಲಕ ತಿದ್ದುಪಡಿ ತರುವ ಮೂಲಕ ಕಾರ್ಮಿಕರ ಮೇಲೆ ದಾಳಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಸಂಘಟನೆಗಳ ನಿರಂತರ ಹೋರಾಟದಿಂದ ಜಾರಿಯಾದ ಕಾರ್ಮಿಕ ಕಾನೂನುಗಳನ್ನು ತೆಗೆದು ಹಾಕಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದ್ದು ಈ ಸಂಹಿತೆಗಳು ಜಾರಿಯಾದರೆ ಕಾರ್ಮಿಕರು ಕಾಪೆರ್Çರೇಟ್ ವರ್ಗದ ಗುಲಾಮರಾಗಬೇಕಾಗುತ್ತದೆ ಹಾಗೂ ಕಾರ್ಮಿಕರ ಎಲ್ಲಾ ಹಕ್ಕುಗಳು ಕಸಿಯಲ್ಪಡುತ್ತದೆ ಎಂದ ರಾಮಣ್ಣ ವಿಟ್ಲ, ಅಕ್ಷರ ದಾಸೋಹ ಹಾಗೂ ಎಲ್ಲಾ ಯೋಜನಾ ಕಾರ್ಮಿಕರನ್ನು ಖಾಯಂ ಗೊಳಿಸಬೇಕೆಂದು ಒತ್ತಾಯಿಸಿದರು.
ಎಐಸಿಸಿಟಿಯು ರಾಜ್ಯ ಗೌರವಾದ್ಯಕ್ಷ ಮೋಹನ್ ಕೆ ಇ, ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ ಶಾಹುಲ್ ಹಮೀದ್, ಅಕ್ಷರ ದಾಸೋಹ ನೌಕರರ ಸಂಘದ ಮುಖಂಡ ಜಯಶ್ರೀ, ಎಐಸಿಸಿಟಿಯು, ಐಪಿಸಿಎಲ್ ಘಟಕಾದ್ಯಕ್ಷ ಪ್ರದೀಪ್, ಅಖಿಲ ಭಾರತ ಕಿಸಾನ್ ಮಹಾಸಭಾದ ಜಿಲ್ಲಾಧ್ಯಕ್ಷ ಮಹಾವೀರ್ ಜೈನ್ ಪುತ್ತೂರು, ಪ್ರಮುಖರಾದ ಸಂಜೀವ ಬೆಳ್ತಂಗಡಿ, ಸುಲೈಮಾನ್ ಕೆಲಿಂಜ, ಎಐಸಿಸಿಟಿಯು ರಾಜ್ಯ ಸಮಿತಿ ಸದಸ್ಯ ಅಶ್ರಫ್ ಕೊಯಿಲ, ಎಐಸಿಸಿಟಿಯು ಜಿಲ್ಲಾ ಮುಖಂಡರಾದ ಭರತ್ ಕುಮಾರ್, ವಿಶ್ವನಾಥ್, ಸಜೇಶ್ ವಿಟ್ಲ, ಲಿಯಾಕತ್ ಖಾನ್, ಕಟ್ಟಡ ಕಾರ್ಮಿಕರ ಸಂಘದ ಆನಂದ ಶೆಟ್ಟಿಗಾರ್, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆಯ ಸುಧಾ ರಾವ್ ಬೆಳ್ತಂಗಡಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment