ಬಂಟ್ವಾಳ, ಜುಲೈ 30, 2025 (ಕರಾವಳಿ ಟೈಮ್ಸ್) : ಕರ್ನಾಟಕ ವಿಧಾನಸಭೆಯ ಸರ್ಕಾರಿ ಭರವಸೆಗಳ ಸಮಿತಿ ಸಭೆ ಬುಧವಾರ ಬೆಂಗಳೂರಿನ ಶಾಸಕರ ಭವನದ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಭರವಸೆಗಳ ಕುರಿತು ಸಭೆಯಲ್ಲಿ ಚರ್ಚೆಗಳು ನಡೆಯಿತು.
ಸಭೆಯಲ್ಲಿ ಭಾಗವಹಿಸಿದ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಅವರು ಬಂಟ್ವಾಳ ಕ್ಷೇತ್ರದಲ್ಲಿ ಹಾದು ಹೋಗುವ ಲೋಕೋಪಯೋಗಿ ಇಲಾಖೆಯ ರಸ್ತೆಗಳ ಅಭಿವೃದ್ಧಿ ಕುರಿತು ಚರ್ಚಿಸಿದರು. ಬಾರಿ ಮಳೆಯಿಂದ ಪ್ರಮುಖ ರಸ್ತೆಗಳು ಹಾನಿಗೊಂಡು ವಾಹನ ಸಂಚಾರ ಕಷ್ಟ ಸಾಧ್ಯವಾಗಿದೆ. ಪ್ರಾಕೃತಿಕ ವಿಕೋಪದಡಿ ಈ ರಸ್ತೆಗಳನ್ನು ಶೀಘ್ರವಾಗಿ ದುರಸ್ತಿಗೊಳಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು. ಪ್ರಮುಖವಾಗಿ 2017-18ನೇ ಸಾಲಿನಲ್ಲಿ ಬಂಟ್ವಾಳದ ಕಡೇಶಿವಾಲಯ-ಮಣಿನಾಲ್ಕೂರು ಗ್ರಾಮದಲ್ಲಿ 18 ಕೋಟಿ ರೂಪಾಯಿ ವೆಚ್ಚದಲ್ಲಿ ಕೆ ಆರ್ ಡಿ ಸಿ ಎಲ್ ಮೂಲಕ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ನಿಧಾನಗತಿಯಲ್ಲಿ ನಡೆಯುತ್ತಿರುವ ಈ ಕಾಮಗಾರಿಯನ್ನು ತಕ್ಷಣದಲ್ಲಿ ಪುರ್ಣಗೊಳಿಸುವ ಬಗ್ಗೆ ತಿಳಿಸಿದರು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಅಪರ ಕಾರ್ಯದರ್ಶಿ ವಿಜಯ ಕುಮಾರಿ, ರಾಜ್ಯ ಹೆದ್ದಾರಿ ಮುಖ್ಯ ಯೋಜನಾಧಿಕಾರಿ ಶಾಂತಕುಮಾರ, ಕೆ ಆರ್ ಡಿ ಸಿ ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಎನ್ ಸುಶೀಲಮ್ಮ, ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಎನ್ ರಾಜಣ್ಣ ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದರು.
0 comments:
Post a Comment