ಬಂಟ್ವಾಳ, ಜುಲೈ 15, 2025 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಮತ್ತೆ ಮಳೆ ಬಿರುಸು ಪಡೆದುಕೊಂಡಿದ್ದು, ಕೆಲವೆಡೆ ಮಳೆ ಹಾನಿ ಪ್ರಕರಣಗಳೂ ವರದಿಯಾಗಿದೆ. ಪಾಣೆಮಂಗಳೂರು ಗ್ರಾಮದ ಬಂಗ್ಲೆಗುಡ್ಡೆ ನಿವಾಸಿ ಅಬ್ದುಲ್ ರಝಾಕ್ ಅವರ ಮನೆಯ ಕಂಪೌಂಡ್ ಕುಸಿದು ಬಿದ್ದು ಹಾನಿ ಸಂಭವಿಸಿದೆ. ಘಟನೆಯಿಂದ ಅಂಗಳದಲ್ಲಿ ನೆಡಲಾಗಿದ್ದ ಅಡಿಕೆ ಹಾಗೂ ತೆಂಗಿನ ಗಿಡಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಪಾಣೆಮಂಗಳೂರು ಗ್ರಾಮದ ನಿವಾಸಿ ಸೌಮ್ಯ ಬಿನ್ ದಿವಂಗತ ಮನೋಹರ ಅವರ ವಾಸ್ತವ್ಯದ ಮನೆಗೆ ತೀವ್ರ ಹಾನಿಯಾಗಿದೆ.
ಬಡಗಬೆಳ್ಳೂರು ಗ್ರಾಮದ ನಿವಾಸಿ ಮೋಹಿನಿ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಬಿಳಿಯೂರು ಗ್ರಾಮದ ದರ್ಕಾಸು ನಿವಾಸಿ ಬಲ್ಲೆದಿ ಅವರ ವಾಸ್ತವ್ಯದ ಕಚ್ಚಾ ಮನೆಗೆ ಹಾನಿಯಾಗಿದ್ದು, ಮನೆ ಮಂದಿ ಪಕ್ಕದ ಮನೆಗೆ ಸ್ಥಳಾಂತರಗೊಂಡಿದ್ದಾರೆ.
ಅರಳ ಗ್ರಾಮದ ಮೂಲರಪಟ್ಣ ನಿವಾಸಿ ಜೀನತ್ ಕೋಂ ಅಬ್ದುಲ್ ಅಝೀಝ್ ಅವರ ವಾಸ್ತವ್ಯದ ಮನೆಯ ಬದಿಗೆ ಆವರಣ ಗೋಡೆ ಬಿದ್ದಿದ್ದು ಮನೆಯ ಗೋಡೆಗೆ ಭಾಗಶಃ ಹಾನಿಯಾಗಿದ್ದು, ಮನೆ ಮಂದಿ ಸಮೀಪದ ಮನೆಗೆ ಸ್ಥಳಾಂತರಗೊಂಡಿದ್ದಾರೆ.
0 comments:
Post a Comment