ಸುಳ್ಯ, ಜುಲೈ 10, 2025 (ಕರಾವಳಿ ಟೈಮ್ಸ್) : ದಾರಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕೂಡಿಯಾಲ ಗ್ರಾಮದ ಕಲ್ಪನೆ ಎಂಬಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಇಲ್ಲಿನ ನಿವಾಸಿ ಕೆ ದಿವಾಕರ (48) ಎಂದು ಹೆಸರಿಸಲಾಗಿದೆ. ಇವರು ಬುಧವಾರ ಬೆಳಿಗ್ಗೆ 5 ಗಂಟೆಗೆ ಮನೆಯಿಂದ ಹೊರಟಿದ್ದು, ಬಳಿಕ ಇವರ ಅಣ್ಣ ಕೆ ತ್ಯಾಗರಾಜ ಅವರು ಬೆಳಿಗ್ಗೆ 7 ಗಂಟೆಗೆ ಅದೇ ದಾರಿಯಲ್ಲಿ ನಡೆದುಕೊಂಡು ಹೋಗುವ ವೇಳೆ ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿ ದಿವಾಕರ ಅವರು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಹಿಡಿದುಕೊಂಡ ಸ್ಥಿತಿಯಲ್ಲಿ ನೆಲದಲ್ಲಿ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಇವರ ಅಣ್ಣ ತ್ಯಾಗರಾಜ ಅವರು ಪವರ್ ಮ್ಯಾನ್ ವಸಂತ ಅವರಿಗೆ ಕರೆ ಮಾಡಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ದಿವಾಕರ ಅವರನ್ನು ಮುಟ್ಟಿ ನೋಡಿದಾಗ ಅವರು ಮೃತಪಟ್ಟಿರುವುದು ಗೊತ್ತಾಗಿದೆ. ವಿದ್ಯುತ್ ತಂತಿ ಸ್ಪರ್ಶಿಸಿ ಅವರು ಮೃತಪಟ್ಟಿರುವ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
0 comments:
Post a Comment